
ಬೆಂಗಳೂರು, ಜೂ. ೧೯- ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಅಡ್ಡ ಮತದಾನವಾಗಿರುವುದು ಆ ಪಕ್ಷಗಳಲ್ಲಿ ನಾಯಕತ್ವ ಕೊರತೆ ಇರುವುದು ಜಗಜ್ಜಾಹೀರಾಗಿದೆ. ಅವರಲ್ಲೇ ನಂಬಿಕೆ ಇಲ್ಲದಂತಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದರೋ ಅದೇ ಪಕ್ಷದ ಶಾಸಕರು ನಮಗೆ ಮತ ಹಾಕಿದ್ದಾರೆ. ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ನಾಯಕತ್ವಕ್ಕೆ ಸೋಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ, ಗ್ಯಾರಂಟಿ ಯೋಜನೆಗಳಿಂದ ಕುಟುಂಬದ ಸ್ಥಿರತೆ ಕಾಯ್ದುಕೊಂಡಿದೆ. ಹೀಗಾಗಿ ಜೆಡಿಎಸ್-ಬಿಜೆಪಿಯ ಕೆಲ ಶಾಸಕರು ಆತ್ಮಸಾಕ್ಷಿ ಹಾಗೂ ಸ್ವಾಭಿಮಾನದ ಮತ ಹಾಕಿದ್ದಾರೆ ಎಂದರು.
ನಾವು ಅಸಂವಿಧಾನವಾಗಿ ಗೆದ್ದಿಲ್ಲ. ನಾವೇನೂ ಬೇರೆ ಪಕ್ಷದ ಶಾಸಕರ ಕೈ ಕಾಲು ಹಿಡಿದಿರಲಿಲ್ಲ. ಕುದುರೆ ವ್ಯಾಪಾರವಂತೂ ಹಾಗೆ ಇರಲಿಲ್ಲ. ಎಲ್ಲವೂ ಆತ್ಮಸಾಕ್ಷಿಯಂತೆ ನಡೆದಿದೆ ಎಂದರು.
ಮೇಕೆದಾಟು ಸಂಬಂಧ ವಿಧಾನಸಭೆಯಲ್ಲಿ ತಮಿಳುನಾಡು ಸರ್ಕಾರ ನಿರ್ಣಯ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಹಿತಾಸಕ್ತಿಯನ್ನು ನೋಡಿಕೊಂಡು ನಿರ್ಣಯ ಮಾಡಿದ್ದಾರೆ. ನಾವು ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡಲೇಬೇಕು. ಮೇಕಾದಾಟುವಿನಿಂದ ಹೆಚ್ಚುವರಿ ನೀರು ಸಂಗ್ರಹವಾಗಿ ತಮಿಳುನಾಡಿಗೂ ಅನುಕೂಲವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೇಕೆದಾಟು ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸಲು ಬಿಜೆಪಿ ಸಂಸದರಿಂದ ಆಗಿಲ್ಲ. ಇವರೆಲ್ಲಾ ಅಸಮರ್ಥ ಶಾಸಕರು ಎಂದು ಟೀಕಿಸಿದರು.
ಗ್ಯಾರಂಟಿ ಪರಿಷ್ಕರಣೆ ಸಂಬಂಧ ಇಂದ ಸಭೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನರ್ಹರಿಗೆ ಗ್ಯಾರಂಟಿ ಹೋಗಬಾರದು ಎಂಬುದು ನಮ್ಮ ಸರ್ಕಾರದ ನಿಲುವು. ಹಾಗಾಗಿ ಪರಿಷ್ಕರಣೆ ಅಗತ್ಯವಿದೆ ಎಂದರು.

























