
ಬೆಂಗಳೂರು,ಜೂ.೨೪-ಸಹಜೀವನ ನಡೆಸಲು ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಮಗಳನ್ನು ಕೆಆರ್ ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪಾಂಡಿಚೇರಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಪ್ರಿಯಕರ ಕೆನ್ನತ್ ನ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕೆಆರ್ ಪುರಂನ ಸಿಗೇಹಳ್ಳಿಯ ತಂದೆ ಸೋಮಸುಂದರ್ (೫೫), ತಾಯಿ ಮುತ್ತುಲಕ್ಷ್ಮಿ (೪೮) ಹಾಗೂ ಇವರ ಕಿರಿಯ ಮಗಳು ಸುಪ್ರಿಯಾ (೨೦)ಳನ್ನು ಕೊಲೆಗೈದು ಪರಾರಿಯಾಗಿದ್ದ ಶ್ವೇತ ಹಾಗೂ ಆಕೆಯ ಪ್ರಿಯಕರ ಕೆನ್ನತ್ ಬಂಧನಕ್ಕೆ ಆರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ತಂಡಗಳು ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಶ್ವೇತಾಳನ್ನು ಪಾಂಡಿಚೇರಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ಕೃತ್ಯ ನಡೆಸಿದಲ್ಲಿ ಭಾಗಿಯಾಗಿದ್ದ ಆಕೆಯ ಪ್ರಿಯಕರ ಕೆನತ್ ಬಂಧನಕ್ಕೆ ತೀವ್ರ ಶೋಧ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಬಂಧಿತ ಶ್ವೇತಾಳನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು ತ್ರಿವಳಿ ಕೊಲೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ,ಅಲ್ಲದೇ ಆಕೆಯ ಪ್ರಿಯಕರನ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದರು.
ಐ ಅಯಾಮ್ ಸ್ಯಾಡ್:
ಕೊಲೆ ನಡೆದ ಮನೆ ಶೋಧ ನಡೆಸಿದ ವೇಳೆ ಹಲವು ದಿನಗಳಿಂದ ಶ್ವೇತಾ ಬರೆಯುತ್ತಿದ್ದ ಡೈರಿ ಪತ್ತೆಯಾಗಿದೆ.ಡೈರಿಯಲ್ಲಿ ಐ ಅಯಾಮ್ ಸ್ಯಾಡ್, ಐ ಅಯಾಮ್ ಲೋನ್ಸಿ, ಫೀಲಿಂಗ್ ಲವ್, ಐ ಅಯಾಮ್ ಡಿಪ್ರೆಸ್ಟ್, ಐ ಅಯಾಮ್ ಸೂಪಿರಿಯರ್ ಇಂತಹ ಬರಹಗಳು ಪತ್ತೆಯಾಗಿದೆ.
ಪೊಲೀಸರು ಡೈರಿ ಸೇರಿದಂತೆ ಮನೆಯಲ್ಲಿ ಹಲವಾರು ಸಾಕ್ಷಿಗಳ ಕಲೆ ಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಸಂಚಾರ ಮಾಡುತ್ತಿದ್ದರು.
ಶ್ವೇತಾ ಹಾಗೂ ಕೆನತ್ ನ್ಯೂಹಾರಿಜನ್ ಕಾಲೇಜ್‌ನಲ್ಲಿ ಬಿ.ಟೆಕ್ ಓದುವಾಗಲೇ ಇಬ್ಬರ ನಡುವೆ ಲವ್ ಆಗಿದೆ. ಬಿ.ಟೆಕ್ ಮುಗಿಸಿ ಇಬ್ಬರು ಕೆಲಸಕ್ಕೆ ಸೇರಿಕೊಂಡು ಲಿವ್ ಇನ್ ರಿಲೇಷನ್‌ನಲ್ಲಿದ್ದರು. ಕಾರಣಾಂತರಿಂದ ಇಬ್ಬರು ಕೆಲಸ ಬಿಟ್ಟಿರುತ್ತಾರೆ. ಸ್ವಂತ ಉದ್ಯಮ ಪ್ರಾರಂಭಿಸಲು ಯೋಜನೆ ಮಾಡಿ ಪೋಷಕರ ಹೆಸರಿನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ೩೦ ಲಕ್ಷ ಹಣ ಸಾಲ ಪಡೆದಿರುತ್ತಾರೆ.
೩೦ ಲಕ್ಷ ಸಾಲದ ಬಡ್ಡಿಯಾಗಲಿ ಏನು ಕೂಡ ಕಟ್ಟದ ಕಾರಣ ಪೋಷಕರಿಗೆ ನೋಟಿಸ್ ಹೋಗಿರುತ್ತದೆ. ಅಲ್ಲಿಯ ತನಕ ಆರೋಪಿಗಳು ಸಾಲ ತಗೆದುಕೊಂಡಿರುವ ವಿಚಾರ ಪೋಷಕರಿಗೆ ಗೊತ್ತಿರುವುದಿಲ್ಲ.
ಹೆಚ್‌ಎಎಲ್ ಉದ್ಯೋಗಿ:
ಆರೋಪಿಗಳು ಲೀವ್ ಇನ್ ರಿಲೇಷನ್‌ನಲ್ಲಿರುವ ವಿಚಾರ ಆರೋಪಿ ಕೆನತ್ ಪೋಷಕರಿಗೂ ತಿಳಿದಿರುವುದಿಲ್ಲ. ಕೆನತ್ ತಂದೆ ಹೆಚ್‌ಎಎಲ್ ಉದ್ಯೋಗಿಯಾಗಿದ್ದಾರೆ. ಪೋಷಕರ ಸಹಕಾರ ಸಿಗದೆ ಇದ್ದ ಕಾರಣಕ್ಕೆ ಆರೋಪಿ ಕೆನತ್ ಅಸಮಾಧಾನಗೊಂಡಿದ್ದ ಇದೇ ವಿಚಾರಕ್ಕೆ ಗಲಾಟೆ ಆಗಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಮೂವರಿಗೆ ಆರೋಪಿಗಳು ೩೦ ಬಾರಿ ಚುಚ್ಚಿರುವುದು ಪತ್ತೆಯಾಗಿದೆ.
ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಎರಡು ತಿಂಗಳುಗಳಿಂದ ಡಾಮಿನಿಕ್ ಲೇಔಟ್‌ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಇಬ್ಬರೂ ಒಟ್ಟಿಗೆ ವಾಸಿಸುತ್ತಿರುವುದಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
ಮಗಳು ಸಾಲ ತೆಗೆದುಕೊಂಡ ಸಂಬಂಧ ಬ್ಯಾಂಕ್‌ನಿಂದ ನೋಟಿಸ್ ಬಂದಾಗ ಆತಂಕಗೊಂಡು ಪೋಷಕರು ಮಗಳನ್ನು ಭೇಟಿಯಾಗಲು ಬಂದಿದ್ದರು.
೩೦ ಬಾರಿ ಇರಿತ:
ಜೂ.೨೨ರ ರಾತ್ರಿ ೭:೩೦ರ ಸುಮಾರಿಗೆ ಪೋಷಕರು ಹಾಗೂ ಶ್ವೇತಾ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ, ಆಕ್ರೋಶಗೊಂಡ ಮಗಳು ಚಾಕುವಿನಿಂದ ೩೦ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾರೆ,ತೀವ್ರವಾಗಿ ಇರಿತಕ್ಕೊಳಗಾದ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯ ಒಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.
ಮನೆಯೊಳಗೆ ಪತ್ನಿ, ಕಿರಿಯ ಮಗಳು ಸಾವನ್ನಪ್ಪಿದ್ದರೂ, ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಹೇಗೋ ಎದ್ದುಬಿದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರಾದೂ ಚಿಕಿತ್ಸೆ ಫಲಕಾರಿಯಾಗದೇ ಸೋಮಸುಂದರ್ ಮೃತಪಟ್ಟಿದ್ದಾರೆ. ಇತ್ತ ಆರೋಪಿಗಳು ಮನೆಯಿಂದ ಪರಾರಿಯಾಗಿದ್ದರು.





























