Home ಮುಖಪುಟ ಸುದ್ದಿ ಸಚಿವ ಜಾರಕಿಹೊಳಿ ಭಾವನ ಮನೆ ಮೇಲೆ ಇಡಿ ದಾಳಿ

ಸಚಿವ ಜಾರಕಿಹೊಳಿ ಭಾವನ ಮನೆ ಮೇಲೆ ಇಡಿ ದಾಳಿ

ಬೆಳಗಾವಿ,ಜೂ.೨೪- ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ಡಾ. ವೈ. ಮಂಜುನಾಥ ಅವರ ಮನೆ ಸೇರಿ ೬ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.


ಬೆಳಗಾವಿಯ ದೂರದರ್ಶನ ಕೇಂದ್ರದಲ್ಲಿರುವ ಡಾ. ವೈ. ಮಂಜುನಾಥ ಅವರ ಮನೆ ಮೇಲೆ ಗೋವಾ, ಬೆಂಗಳೂರು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ ಮಾಜಿ ಸಂಸದ ವೈ. ದೇವೆಂದ್ರಪ್ಪ ಅವರ ಪುತ್ರರಾಗಿರುವ ಡಾ. ವೈ. ಮಂಜುನಾಥ್ ಅವರುಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯನ್ನು ವಿವಾಹವಾಗಿದ್ದಾರೆ.


ಕಳೆದ ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಮಂಜುನಾಥ ಅವರು ಸೇವೆ ಸಲ್ಲಿಸುತ್ತಿದ್ದಾರೆ. ೧೦ಕ್ಕೂ ಅಧಿಕ ಅರೆಸೇನಾ ಪಡೆ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.


ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ ನಡೆಸಲಾಗಿದೆ. ಬೆಳಗಾವಿ ಮನೆ ಸೇರಿದಂತೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಎರಡೂ ಮನೆಗಳು, ಮೈಸೂರಲ್ಲಿರುವ ಡಾ. ವೈ. ಮಂಜುನಾಥ ಅವರ ಸ್ನೇಹಿತೆಯ ಮನೆ ಮೇಲೂ ದಾಳಿ ಮಾಡಲಾಗಿದೆ. ಬೆಂಗಳೂರಲ್ಲಿರುವ ಮಂಜುನಾಥ ಅವರಿಗೆ ಸೇರಿದ ಅಪಾರ್ಟ್‌ಮೆಂಟ್, ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿನ ಸ್ನೇಹಿತನ ಮನೆ ಮೇಲೆಯೂ ದಾಳಿ ಮಾಡಲಾಗಿದೆ.


ಬೇನಾಮಿ ಹೆಸರಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದಿದ್ದು, ಸದ್ಯ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಡಾ. ವೈ. ಮಂಜುನಾಥ ಇದ್ದಾರೆ. ಈ ಅಪಾರ್ಟ್‌ಮೆಂಟ್ ಮೇಲೂ ಬೆಂಗಳೂರು ಇಡಿ ಅಧಿಕಾರಿಗಳ ದಾಳಿ ನಡೆಸಿದ್ದು, ವಿಚಾರಣೆ ಮುಂದುವರಿಸಿದೆ.