
ಬೆಂಗಳೂರು,ಜೂ. ೨೪- ಖಾತೆಯೇ ಇಲ್ಲದ ಗೃಹಲಕ್ಷ್ಮಿ ಹೆರಿಗೆ ಹಣ ವರ್ಗಾವಣೆ ಹಾಗೂ ಒಂದೇ ಖಾತೆಗೆ ಹಲವು ಕೋಟಿ ಹಣ ವರ್ಗಾವಣೆ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ ಗೃಹಲಕ್ಷ್ಮಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಇದೇ ಕಾಂಗ್ರೆಸ್ ಸರ್ಕಾರದ ಅಸಲಿ ಗ್ಯಾರೆಂಟಿ ಹಣ ವರ್ಗಾವಣೆ ದೊಡ್ಡ ಹಗರಣವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು
ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಕರ್ನಾಟಕದ ಇತಿಹಾಸದಲ್ಲೇ ನಡೆದ ಅತ್ಯಂತ ವ್ಯವಸ್ಥಿತವಾದ ಹಗಲು ದರೋಡೆ ಅಂದರೆ ಅದು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಗ್ಯಾರೆಂಟಿ. ಎಂದು ಖಾತೆಗಳೇ ಇಲ್ಲದ ಗೃಹಲಕ್ಷ್ಮಿಯರಿಗೆ ಹಣ ವರ್ಗಾವಣೆ ಆಗಿರುವ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ
ಗ್ಯಾರೆಂಟಿ ಯೋಜನೆಗಳ ಪ್ರಚಾರದ ಆಡಂಬರದ ಹಿಂದೆ ಜನರ ತೆರಿಗೆ ಹಣವನ್ನು ಹೇಗೆ ಲೂಟಿ ಹೊಡೆಯಲಾಗುತ್ತಿದೆ ಎಂಬುದನ್ನು ಮಹಾಲೇಖಪಾಲರ ಡೇಟಾ ಅನಾಲಿಟಿಕ್ಸ್ ವರದಿ ಸಾಕ್ಷಿ ಸಮೇತ ಜಗತ್ತಿನ ಮುಂದೆ ಬೆತ್ತಲೆ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟ ’ಚಮತ್ಕಾರ’ಗಳು ಸಾಮಾನ್ಯ ಜನರನ್ನು ನಡುಗಿಸುವಂತಿವೆ!
ಒಂದೇ ಖಾತೆಗೆ ಕೋಟಿ ಕೋಟಿ ಜಮಾ:
ಬರೋಬ್ಬರಿ ೧೯,೦೨೦ ’ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆ ಲಿಂಕ್ ಆಗಿದೆ! ಆ ಒಂದೇ ಒಂದು ನಿಗೂಢ ಖಾತೆಗೆ ಪ್ರತಿ ತಿಂಗಳು ೩.೮೦ ಕೋಟಿ ರೂಪಾಯಿ ಸದ್ದಿಲ್ಲದೆ ಜಮೆಯಾಗುತ್ತಿದೆ! ಆ ಖಾತೆ ಯಾರದ್ದು ಆ ಲೂಟಿಯ ಹಣ ನೇರವಾಗಿ ಯಾರ ಜೇಬಿಗೆ ಹೋಗುತ್ತಿದೆ, ಮುಖ್ಯಮಂತ್ರಿಶಿವಕುಮಾರ್ ಅವರೇ ಎಂದು ಪ್ರಶ್ನಿಸಿರುವ ಅವರು
ಬ್ಯಾಂಕ್ ಖಾತೆ ವಿವರವೇ ಇಲ್ಲದೆ ?೪೬.೫೨ ಕೋಟಿ ಲೂಟಿ: ಆಗಿದೆ ಎಂದಿದ್ದಾರೆ
ಯಾವುದೇ ಅಧಿಕೃತ ಬ್ಯಾಂಕ್ ಖಾತೆ ಸಂಖ್ಯೆಗಳ ದಾಖಲೆಗಳೇ ಇಲ್ಲದೆ ಒಟ್ಟು ೨೩,೨೬೨ ಖಾತೆಗಳಿಗೆ ೪೬.೫೨ ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ! ದಾಖಲೆಗಳೇ ಇಲ್ಲದ ಜಾಗಕ್ಕೆ ಇಷ್ಟೊಂದು ಕೋಟಿ ಹಣ ಹರಿದು ಹೋಗಲು ಹೇಗೆ ಸಾಧ್ಯ
ಕೆಲವು ಫಲಾನುಭವಿಗಳ ಹೆಸರಿನಲ್ಲಿ ಪದೇ ಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸಲಾಗಿದ್ದು, ಇಂತಹ ೧೦ ಲಕ್ಷಕ್ಕೂ ಹೆಚ್ಚು ಶಂಕಾಸ್ಪದ ಮತ್ತು ಅಕ್ರಮ ದಾಖಲೆಗಳು ಪತ್ತೆಯಾಗಿವೆ!
ಸಿಎಜಿ ಆಡಿಟ್ ಸಂಸ್ಥೆಯು ಇಲಾಖೆಗೆ ಪದೇ ಪದೇ ಜ್ಞಾಪನಾ ಪತ್ರಗಳನ್ನು ಕಳುಹಿಸಿ ವಿವರ ಕೇಳಿದರೂ, ನಿಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರ ಈ ಮಹಾ ಹಗರಣವನ್ನು ಮುಚ್ಚಿಹಾಕಲು, ಕಡತಗಳನ್ನು ಬಚ್ಚಿಡಲು ಯತ್ನಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ
ಗೃಹಲಕ್ಷ್ಮಿಯ ಹಣ ನಾಡಿನ ಬಡ ಹೆಣ್ಣುಮಕ್ಕಳಿಗೆ ತಲುಪುತ್ತಿದೆಯೋ ಅಥವಾ ನಿಮ್ಮ ಕಾಂಗ್ರೆಸ್ ಹೈಕಮಾಂಡ್‌ನ ಚುನಾವಣಾ ನಿಧಿ ತುಂಬಿಸಲು ಬಳಕೆಯಾಗುತ್ತಿದೆಯೋ? ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಸರ್ಕಾರದ ಉನ್ನತ ಮಟ್ಟದಲ್ಲೇ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಹಗಲು ದರೋಡೆ!
ತಕ್ಷಣವೇ ಈ ಗ್ಯಾರೆಂಟಿ ಲೂಟಿಯ ಬಗ್ಗೆ ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರನ್ನು ಜೈಲಿಗಟ್ಟಬೇಕು. ಬಡವರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವ ನಿಮ್ಮ ಈ ಧೋಖಾ ಗ್ಯಾರೆಂಟಿ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ನಿಶ್ಚಿತ! ಎಂದಿದ್ದಾರೆ





























