Home ಜಿಲ್ಲೆ ರೋಗಿಗಳಿಗೆ ಪ್ರೀತಿ, ವಿಶ್ವಾಸದಿಂದ ಚಿಕಿತ್ಸೆ ನೀಡಿದರೆ ಅರ್ಧ ರೋಗ ಗುಣವಾಗುತ್ತದೆ: ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

ರೋಗಿಗಳಿಗೆ ಪ್ರೀತಿ, ವಿಶ್ವಾಸದಿಂದ ಚಿಕಿತ್ಸೆ ನೀಡಿದರೆ ಅರ್ಧ ರೋಗ ಗುಣವಾಗುತ್ತದೆ: ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

ಯಾದಗಿರ: ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯನ್ನು ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯಿಂದ ಮಾತನಾಡಿಸಿ ಆರೈಕೆ ಮಾಡಿದರೆ ಅವರ ಅರ್ಧದಷ್ಟು ನೋವು ಅಲ್ಲಿಯೇ ಕಡಿಮೆಯಾಗುತ್ತದೆ. ಆದ್ದರಿಂದ ವೈದ್ಯರು ಮಾನವೀಯ ಸ್ಪಂದನೆಯೊAದಿಗೆ ಸೇವೆ ಸಲ್ಲಿಸಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಸಲಹೆ ನೀಡಿದರು.

ನಗರದ ಎನ್‌ವಿಎಂ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ (Iಒಂ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಸಂಶೋಧನೆಯ ಮೂಲಕ ಹೊಸ ಎತ್ತರ ತಲುಪಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸುಧಾರಿತ ಚಿಕಿತ್ಸಾ ವಿಧಾನಗಳಿಂದ ಸಂಕೀರ್ಣ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗುತ್ತಿದೆ. ಆದರೆ ವೈದ್ಯಕೀಯ ಕ್ಷೇತ್ರದ ಯಶಸ್ಸಿನ ಮೂಲ ಅಂಶ ರೋಗಿಯೊಂದಿಗೆ ಬೆಳೆಸುವ ವಿಶ್ವಾಸದ ಸಂಬAಧವೇ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ವೈದ್ಯರು ರೋಗಿಯ ನೋವನ್ನು ತಮ್ಮ ನೋವಿನಂತೆ ಅರ್ಥಮಾಡಿಕೊಂಡು, ಸಹಾನುಭೂತಿಯಿಂದ ಚಿಕಿತ್ಸೆ ನೀಡಿದರೆ ಸಮಾಜಕ್ಕೆ ಮಹತ್ತರ ಸೇವೆ ಸಲ್ಲಿಸಿದಂತಾಗುತ್ತದೆ. ವೈದ್ಯರ ಸೇವಾ ಮನೋಭಾವವೇ ಅವರನ್ನು ಜನರ ದೃಷ್ಟಿಯಲ್ಲಿ “ಎರಡನೇ ದೇವರು” ಎಂಬ ಗೌರವಕ್ಕೆ ಪಾತ್ರರನ್ನಾಗಿಸಿದೆ ಎಂದು ಹೇಳಿದರು.

ಇಂದು ವೈದ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಒಬ್ಬ ವೈದ್ಯರನ್ನು ಕಾಣಬಹುದಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ವಿಶೇಷವಾಗಿ ಮಹಿಳೆಯರು ವೈದ್ಯಕೀಯ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ತಮ್ಮ ಪರಿಶ್ರಮ, ಶಿಸ್ತು ಮತ್ತು ಗುರಿಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಜಿಲ್ಲೆಯ ಹಿರಿಯ ವೈದ್ಯರಾದ ಡಾ. ಸಂಗಮ್ಮ ಹಾಗೂ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರ ಸೇವೆ ಮತ್ತು ಅನುಭವ ಇಂದಿನ ಯುವ ವೈದ್ಯರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಸೇವಾ ಮನೋಭಾವವನ್ನು ಹೊಸ ತಲೆಮಾರಿನ ವೈದ್ಯರು ಆದರ್ಶವಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘವು ಜಿಲ್ಲೆಯ ವೈದ್ಯರನ್ನು ಒಗ್ಗೂಡಿಸಿ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸಂಘದ ಎಲ್ಲ ಜನಪರ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಶಾಸಕ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಪೂಜಾರಿ ಸಂಘದ ವಾರ್ಷಿಕ ಚಟುವಟಿಕೆಗಳು, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಹಾಗೂ ಸಂಘದ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ. ಸಂಗಮ್ಮ, ಡಾ. ವೀರಬಸವಂತರೆಡ್ಡಿ ಮುದ್ನಾಳ, ಹಿರಿಯ ವೈದ್ಯ ಡಾ. ಸುಭಾಷ ಕರಣಗಿ ಹಾಗೂ ಡಾ. ಲಕ್ಷ್ಮೀ ಪಾಟೀಲ್ ಅತಿಥಿಗಳಾಗಿ ಮಾತನಾಡಿ ವೈದ್ಯಕೀಯ ವೃತ್ತಿಯ ಮಹತ್ವ, ಸಾಮಾಜಿಕ ಹೊಣೆಗಾರಿಕೆ ಮತ್ತು ಸೇವಾ ಮನೋಭಾವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ನಿರೂಪಿಸಿದ ಡಾ. ವೀರೇಶ ಜಾಕಾ, ಜಿಲ್ಲೆಯಲ್ಲಿನ ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಸೇವೆಗಳ ವಿಸ್ತರಣೆ ಹಾಗೂ ವೈದ್ಯರ ಪಾತ್ರದ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಡಾ. ಭಗವಂತ ಅನವಾರ್, ಡಾ. ಸಿ.ಎಂ. ಪಾಟೀಲ್, ಡಾ. ಸುರೇಶರೆಡ್ಡಿ, ಡಾ. ಸುರೇಖಾ ಹಾಗೂ ಡಾ. ಶೈಲಜಾ ವರ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಭಗವಂತ ಅನವಾರ್ ವೈದ್ಯರು ಮತ್ತು ರೋಗಿಗಳ ನಡುವಿನ ದೈನಂದಿನ ಸಂಭಾಷಣೆಯನ್ನು ಹಾಸ್ಯಮಯ ಶೈಲಿಯಲ್ಲಿ ನಿರೂಪಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ ಬಾಸುತಕರ್ ಸೇರಿದಂತೆ ಜಿಲ್ಲೆಯ ಅನೇಕ ವೈದ್ಯರು, ಗಣ್ಯರು ಹಾಗೂ ವೈದ್ಯಕೀಯ ವೃತ್ತಿಯ ಸದಸ್ಯರು ಉಪಸ್ಥಿತರಿದ್ದರು