
ಬೀದರ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಿ, ಪ್ರಜಾಪ್ರಭುತ್ವದ ಮರುಸ್ಥಾಪನೆ ಮಾಡಬೇಕು ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬೀದರ್ನಲ್ಲಿ ಪ್ರತಿಭಟನೆ ಹಾಗೂ ತಿರಂಗಾ ಧ್ವಜ ಮೆರವಣಿಗೆ ನಡೆಯಿತು.
ಎಸ್ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮಧ್ಯಾಹ್ನ ೩ ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು. ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಎಸ್ಐಆರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಅಂಬೇಡ್ಕರ್ ವೃತ್ತದಿಂದ ಭಗತ್ ಸಿಂಗ್ ವೃತ್ತದವರೆಗೆ ತಿರಂಗಾ ಧ್ವಜ ಹಿಡಿದು ಮೆರವಣಿಗೆ ನಡೆಸಿದರು.
ರಾಷ್ಟ್ರಮಟ್ಟದ ಕರೆಯ ಮೇರೆಗೆ ಬೀದರ್ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ದೇಶಾದ್ಯಂತ ಜಂತರ್ ಮಂತರ್ ಮಾದರಿಯ ಪ್ರತಿಭಟನಾ ಸಭೆಗಳನ್ನು ಆಯೋಜಿಸುವ ಮೂಲಕ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಜನಾಂದೋಲನ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆ ತರುವ ನೀತಿಗಳನ್ನು ಖಂಡಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಒತ್ತಾಯಿಸಿದರು.
‘ಹರ್ ಹಾಥ್ ಮೇ ತಿರಂಗಾ, ಹರ್ ಗಲಿ ಮೇ ಜಂತರ್ ಮಂತರ್’ ಎಂಬ ಘೋಷಣೆಯೊಂದಿಗೆ ಜನರನ್ನು ಸಂಘಟಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸಾಮೂಹಿಕ ಹೋರಾಟ ರೂಪಿಸುವ ಅಗತ್ಯವಿದೆ. ದೇಶದ ಭವಿಷ್ಯ ಯುವಜನರ ಕೈಯಲ್ಲಿದ್ದು, ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಎಸ್ಐಆರ್ ರದ್ದತಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಮತದಾರರ ಪಟ್ಟಿಯಿಂದ ಅಳಿಸಲಾಗಿರುವ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ-೨೦೨೩ಕ್ಕೆ ಮಾಡಲಾದ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಕ್ಷಪಾತರಹಿತ ಪ್ರಕ್ರಿಯೆಯ ಮೂಲಕ ಹೊಸ ಚುನಾವಣಾ ಆಯೋಗವನ್ನು ನೇಮಿಸಬೇಕು. ಮತದಾರರ ಪಟ್ಟಿಯನ್ನು ನ್ಯಾಯಸಮ್ಮತವಾಗಿ ಪರಿಷ್ಕರಿಸಬೇಕು. ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಹಮ್ಮದ್ ನಿಜಾಮುದ್ದೀನ್, ಬಾಬುರಾವ್ ಹೊನ್ನಾ, ಮಾರುತಿ ಬೌದ್ಧೆ, ಓಂಪ್ರಕಾಶ ರೊಟ್ಟೆ, ವಿಠಲದಾಸ ಪ್ಯಾಗೆ, ಡಾ. ಮಕ್ಸೂದ್ ಚಂದಾ, ಡಾ. ದೇವಿದಾಸ ತುಮಕುಂಟೆ, ರೇಷ್ಮಾ ಹಂಸರಾಜ್, ಮುಹಮ್ಮದ್ ಆಷಿಫುದ್ದೀನ್, ಎಂ.ಡಿ. ಶಫಾಯತ್ ಅಲಿ, ಗುರುನಾಥ ಗಡ್ಡೆ, ನಜೀರ್ ಸಾಬ್, ಡಾ. ಜಿಯಾವುಲ್ ಇಸ್ಲಾಂ, ಮುಹಮ್ಮದ್ ಇಸೂಫ್, ಮುಬಾಸೀರ್ ಸಿಂಧೆ, ಅರುಣ ಪಟೇಲ್, ಸೈಯದ್ ಮನ್ಸೂರ್ ಖಾದ್ರಿ, ಸಂತೋಷಕುಮಾರ ಜೋಳದಾಬಕೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





















