Home Lead News ಚಂಡಮಾರುತಕ್ಕೆ ಮೂರು ಬಲಿ

ಚಂಡಮಾರುತಕ್ಕೆ ಮೂರು ಬಲಿ

ಅಮರಾವತಿ/ಭುವನೇಶ್ವರ, ಅ. ೨೮- ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ‘ಅರ್ನಬ್’ ಚಂಡಮಾರುತ ಆಂಧ್ರಪ್ರದೇಶ, ಯಾನಂ ಕರಾವಳಿಯನ್ನು ದಾಟಿದ್ದು, ಭಾರಿ ಗಾಳಿ ಮತ್ತು ಮಳೆಯಿಂದ ಆಂಧ್ರಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಆಂಧ್ರದಲ್ಲಿ ಮೂವರು ಮೃತಪಟ್ಟಿದ್ದು, ೩೧ ಮನೆಗಳಿಗೆ ಹಾನಿಯಾಗಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗ ೭೧೯ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿ ವಿದ್ಯುತ್ ಪೂರೈಕೆ ಹಾಗೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಇಂದು ಬೆಳಗಿನ ಜಾವ ಕರಾವಳಿಯನ್ನು ದಾಟಿದ ಚಂಡಮಾರುತದ ತೀವ್ರತೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಚಂಡಮಾರುತದ ಸ್ವರೂಪದಲ್ಲಿದ್ದ ಅರ್ನಾಬ್, ಭೂಭಾಗ ಪ್ರವೇಶಿಸಿದ ಬಳಿಕ ತೀವ್ರ ಚಂಡಮಾರುತವಾಗಿ ದುರ್ಬಲಗೊಂಡಿದೆ. ಆದರೆ, ಅದರ ಪ್ರಭಾವದಿಂದ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗಿದೆ.

ಚಂಡಮಾರುತ ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ ೧೨೫ರಿಂದ ೧೩೫ ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಗಾಳಿಯ ವೇಗ ಕೆಲವೆಡೆ ಗಂಟೆಗೆ ೧೫೦ ಕಿ.ಮೀ.ವರೆಗೆ ತಲುಪಿತ್ತು. ನರಸಾಪುರದ ಸಮೀಪ, ಯಾನಂನ ನೈಋತ್ಯ ಭಾಗದಲ್ಲಿ ಚಂಡಮಾರುತ ಭೂಭಾಗ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅನಕಾಪಲ್ಲಿ, ವಿಶಾಖಪಟ್ಟಣಂ, ಕಾಕಿನಾಡ ಮತ್ತು ಕೋನಸೀಮಾ ಜಿಲ್ಲೆಗಳಲ್ಲಿ ಬಿರುಗಾಳಿಯ ಪರಿಣಾಮ ಹೆಚ್ಚಾಗಿತ್ತು. ಅನೇಕ ಕಡೆ ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಪೂರೈಕೆ ವ್ಯತ್ಯಯಗೊಂಡ ಪ್ರದೇಶಗಳಲ್ಲಿ ಸೇವೆ ಪುನಃಸ್ಥಾಪಿಸಲು ಎನ್‌ಡಿಆರ್‌ಎಫ್ ಕಾರ್‍ಯಾಚರಣೆ ನಡೆಸುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಯಾನಂ ಸೇರಿದಂತೆ ಬಾಧಿತ ಪ್ರದೇಶಗಳಲ್ಲಿ ಉರುಳಿ ಬಿದ್ದಿರುವ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಲು ಯತ್ನಿಸುತ್ತಿದೆ.

ಯಾನಂನಲ್ಲಿ ಬಿದ್ದಿದ್ದ ದೊಡ್ಡ ಆಲದ ಮರವನ್ನು ತೆರವುಗೊಳಿಸಲು ೩೦ ಸದಸ್ಯರ ಎನ್‌ಡಿಆರ್‌ಎಫ್ ತಂಡ ಕಾರ್ಯನಿರ್ವಹಿಸಿದೆ. ಬಿರುಗಾಳಿಯಿಂದ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಚಂಡಮಾರುತದ ಪರಿಣಾಮ ಮುಂದುವರಿಯುವ ಸಾಧ್ಯತೆ ಇರುವುದರಿಂದ ಆಂಧ್ರಪ್ರದೇಶಕ್ಕೆ ಹೆಚ್ಚುವರಿಯಾಗಿ ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.


ಒಡಿಶಾದಲ್ಲಿ ೩೦ ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ


ಚಂಡಮಾರುತದ ಪ್ರಭಾವ ಎದುರಿಸಲು ಒಡಿಶಾ ಸರ್ಕಾರ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ದಕ್ಷಿಣ ಭಾಗದ ಆರು ಜಿಲ್ಲೆಗಳಾದ ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್, ಮಲ್ಕಾನ್‌ಗಿರಿ ಮತ್ತು ನಬರಂಗ್‌ಪುರ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಸ್ಥಳಗಳಿಂದ ೩೦ ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಡಿಶಾ ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರ ಪ್ರಕಾರ, ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಚಂಡಮಾರುತದ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲಾಗಿದೆ.

ರಾಜ್ಯದಲ್ಲಿ ೨,೦೩೭ ಚಂಡಮಾರುತ ಆಶ್ರಯ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಅಲ್ಲಿಗೆ ಸ್ಥಳಾಂತರಗೊಂಡವರಿಗೆ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ೧೬ ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಪರಿಹಾರ ತಂಡಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿವೆ.

ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಮಳೆ ಮುನ್ಸೂಚನೆ

ಅರ್ನಬ್ ಚಂಡಮಾರುತದ ಪ್ರಭಾವದಿಂದ ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಂಚಿ, ಪಶ್ಚಿಮ ಸಿಂಗ್‌ಭೂಮ್, ಪೂರ್ವ ಸಿಂಗ್‌ಭೂಮ್ ಮತ್ತು ಸಿಮ್ಡೆಗಾ ಜಿಲ್ಲೆಗಳಲ್ಲಿ ಅಕ್ಟೋಬರ್ ೨೮ ಮತ್ತು ೨೯ರಂದು ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

ಪಶ್ಚಿಮ ಬಂಗಾಳದ ಕರಾವಳಿ ಮತ್ತು ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ಅಕ್ಟೋಬರ್ ೩೧ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಉಪ-ಹಿಮಾಲಯ ಪ್ರದೇಶಗಳಲ್ಲಿಯೂ ಮಳೆಯ ಪ್ರಭಾವ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ಚಂಡಮಾರುತದ ಕೇಂದ್ರ ಭಾಗ ದುರ್ಬಲಗೊಂಡಿದ್ದರೂ ಅದರ ಮಳೆ ಸಂಬಂಧಿತ ಪರಿಣಾಮಗಳು ಹಲವು ರಾಜ್ಯಗಳಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

ವಿಮಾನ ಸಂಚಾರಕ್ಕೆ ಹೊಡೆತ

ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಗಳಿಗೆ ವ್ಯತ್ಯಯ ಉಂಟಾಗಿದೆ. ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ ೨೭ರಂದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ವಿಜಯವಾಡ ಮತ್ತು ರಾಜಮಂಡ್ರಿ ವಿಮಾನ ನಿಲ್ದಾಣಗಳಲ್ಲಿಯೂ ವಿಮಾನ ಸೇವೆಗಳಿಗೆ ಅಡಚಣೆ ಉಂಟಾಯಿತು.

ಏರ್ ಇಂಡಿಯಾ ಅಕ್ಟೋಬರ್ ೨೭ರಂದು ದೆಹಲಿ- ವಿಶಾಖಪಟ್ಟಣಂ ಮಾರ್ಗದ ಆರು ವಿಮಾನ ಸೇವೆಗಳನ್ನು ರದ್ದುಗೊಳಿಸಿದ್ದು, ಅಕ್ಟೋಬರ್ ೨೮ರಂದು ದೆಹಲಿ?ವಿಜಯವಾಡ ಮಾರ್ಗದ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ೧೩ ವಿಮಾನಗಳನ್ನು ರದ್ದುಗೊಳಿಸಿದೆ. ಇಂಡಿಗೋ ವಿಶಾಖಪಟ್ಟಣಂ, ವಿಜಯವಾಡ ಮತ್ತು ರಾಜಮಂಡ್ರಿಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ, ಆಕಾಶ ಏರ್ ದೆಹಲಿ- ಭೋಗಾಪುರಂ ಸೇವೆಗಳನ್ನು ರದ್ದುಗೊಳಿಸಿದೆ. ಅಲಯನ್ಸ್ ಏರ್ ಯಾವುದೇ ರದ್ದತಿ ವರದಿ ಮಾಡಿಲ್ಲ ಎಂದು ಪ್ರಕಟಿತ ವರದಿ ತಿಳಿಸಿದೆ.

ವಿಮಾನಯಾನ ಸಚಿವಾಲಯವು ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪ್ರಯಾಣಿಕರಿಗೆ ವಿಮಾನದ ಸ್ಥಿತಿಯನ್ನು ಮುಂಚಿತವಾಗಿ ಖಚಿತಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮಾಹಿತಿ ನೀಡುವುದು, ಮರುಬುಕಿಂಗ್ ಮತ್ತು ಮರುಪಾವತಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಚಂಡಮಾರುತ ಕರಾವಳಿ ದಾಟಿದ ಬಳಿಕ ರೈಲು ಕಾರ್ಯಾಚರಣೆಗಳ ಸಿದ್ಧತೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದ್ದಾರೆ. ಬಿರುಗಾಳಿ, ಮರಗಳ ಉರುಳುವಿಕೆ ಮತ್ತು ಮಳೆಯಿಂದ ಉಂಟಾಗಬಹುದಾದ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಚಂಡಮಾರುತ ಭೂಭಾಗ ಪ್ರವೇಶಿಸಿ ದುರ್ಬಲಗೊಂಡಿದ್ದರೂ, ಭಾರಿ ಮಳೆ, ನೀರು ನುಗ್ಗುವಿಕೆ ಮತ್ತು ಬಿರುಗಾಳಿಯಿಂದ ಉಂಟಾಗುವ ಅಪಾಯ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ವಿಶೇಷವಾಗಿ ಕರಾವಳಿ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ರಕ್ಷಣಾ ತಂಡಗಳು ಬಿದ್ದ ಮರಗಳು ಮತ್ತು ಅವಶೇಷಗಳನ್ನು ತೆರವುಗೊಳಿಸುವುದರ ಜೊತೆಗೆ ವಿದ್ಯುತ್, ರಸ್ತೆ ಮತ್ತು ಇತರ ಅಗತ್ಯ ಸೇವೆಗಳನ್ನು ಪುನಃಸ್ಥಾಪಿಸಲು ಆದ್ಯತೆ ನೀಡಿವೆ. ಹವಾಮಾನ ಇಲಾಖೆಯ ಮುಂದಿನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಿವೆ.