Home Lead News ಗುಡ್ಡ ಕುಸಿದು ಮೂವರ ಸಾವು

ಗುಡ್ಡ ಕುಸಿದು ಮೂವರ ಸಾವು


ಕಾವೇರಿ ನದಿ ಪಾತ್ರದಲ್ಲಿ ನಿರಂತರ ಮಳೆ, ಪಶ್ಚಿಮ ಘಟ್ಟದಲ್ಲಿ ಗುಡ್ಡ ಕುಸಿತ

ಬೆಂಗಳೂರು,ಆ.೨ : ಕಾವೇರಿ ನದಿ ಪಾತ್ರ ಸೇರಿದಂತೆ ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲವು ಭಾಗ ಹಾಗೂ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಗುಡ್ಡಕುಸಿದು ೩ ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.

ಕೊಪ್ಪಳ ಜಿಲ್ಲೆಯ ಮಲ್ಲಿಕಾರ್ಜುನ (೩೫),ಪತ್ಬಿ ನಾಗವೇಣಿ(೨೮) ಹಾಗೂ ೩ ವರ್ಷದ ಮಗು ಸಂತೋಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಶೆಡ್‌ನಲ್ಲಿ ವಾಸವಾಗಿದ್ದವರ ಮೇಲೆ ಗುಡ್ಡ ಕುಸಿತವಾಗಿದೆ. ಇವರನ್ನು ರಕ್ಷಿಸಲು ಪ್ರಯತ್ನಿಸಿದ ಓರ್ವ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ತೀರ್ಥಹಳ್ಳಿ ಪೊಲೀಸರು ಆಗಮಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಶೆಡ್‌ನಲ್ಲಿ ಬೇರೆವರು ಇದ್ದಾರೆಯೇ ಎಂದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ. ಶೆಡ್‌ನಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿಯಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ವಯನಾಡು ಮತ್ತು ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯ ಪರಿಣಾಮ ಕಬಿನಿ ಹಾಗೂ ಹಾರಂಗಿ ಜಲಾಶಯದ ಆಣೆಕಟ್ಟುಗಳು ತುಂಬಿದ್ದು, ತಮಿಳುನಾಡಿಗೆ ಸೂಚಿಸಿದ್ದಕ್ಕಿಂತಲೂ ಹೆಚ್ಚಿನ ನೀರು ಹರಿವು ಆರಂಭವಾಗಿದೆ.

ಹೀಗಾಗಿ ನೀರು ಬಿಟ್ಟರೆ ರೈತರ ಆಕ್ರೋಶ, ಪ್ರತಿಭಟನೆ ಬಿಡದೇ ಇದ್ದರೆ ನ್ಯಾಯಾಲಯದ ಛೀಮಾರಿಗೆ ಗುರಿಯಾಗಬೇಕಿದ್ದ ಸಂಕಷ್ಟದಿಂದ ರಾಜ್ಯ ಸರ್ಕಾರವು ಪಾರಾಗಿದೆ.
ಪಶ್ಚಿಮ ವಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳಿಗೆ ಜೀವ ಕಳೆ ಬಂದಿದೆ. ತುಂಗಾ ತುಂಗಾ, ಭದ್ರಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಮೈಸೂರು ವಿಭಾಗದ ಎಡಕುಮಾರಿ ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ರೈಲು ಹಳಿಯಲ್ಲಿ ನಿನ್ನೆ ರಾತ್ರಿ ಸುಮಾರು ೮.೪೫ಕ್ಕೆ ಭೂಕುಸಿತ ಸಂಭವಿಸಿದೆ. ಪರಿಣಾಮ ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗದ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಏಳು ರೈಲುಗಳನ್ನು ಭಾಗಶಃ ರದ್ದುಗೊಳಿಸಿ ತಾತ್ಕಾಲಿಕವಾಗಿ ಕಡಿಮೆ ದೂರಕ್ಕೆ ಸಂಚಾರ ನಡೆಸಲು ನೈಋತ್ಯ ರೈಲ್ವೆ ಆದೇಶಿಸಿದೆ.

ಬೆಂಗಳೂರು-ಕೊಝಿಕೋಡ್ ಎಕ್ಸ್‌ಪ್ರೆಸ್ ಹಾಸನದಲ್ಲೇ ಸ್ಥಗಿತಗೊಳ್ಳಲಿದ್ದು, ಹಾಸನ-ಕೋಝಿಕೋಡ್ ನಡುವೆ ಸಂಚಾರ ಇರುವುದಿಲ್ಲ.೧೭೩೭೭ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಕೂಡ ಹಾಸನದಲ್ಲೇ ಪ್ರಯಾಣ ಅಂತ್ಯಗೊಳಿಸಲಿದ್ದು, ಹಾಸನ-ಮಂಗಳೂರು ಸೆಂಟ್ರಲ್ ನಡುವಿನ ಸೇವೆ ರದ್ದಾಗಿದೆ.

ಅದೇ ರೀತಿ ೧೬೫೯೫ ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಸಕಲೇಶಪುರ-ಕಾರವಾರ ನಡುವಿನ ಸೇವೆ ಸ್ಥಗಿತಗೊಂಡಿದೆ.ಹಿಂತಿರುಗುವ ರೈಲುಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ೧೬೫೮೬ ಮುರುಡೇಶ್ವರ ಎಸ್ ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.
೧೬೫೧೨ ಕೊಝಿಕೋಡ್ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗೆ ಭಾಗಶಃ ರದ್ದಾಗಿದೆ. ೧೭೩೭೮ ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದ್ದು, ಅಲ್ಲಿಂದ ವಿಜಯಪುರದವರೆಗಿನ ಸೇವೆ ರದ್ದಾಗಿದೆ.

ರೈಲುಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ನಡುರಾತ್ರಿಯಿಂದಲೇ ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಪರದಾಡುವಂತಾಯಿತು. ಪ್ರಯಾಣಿಕರಿಗೆ ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಇದೇ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ರೈಲಿನಲ್ಲಿ ತೆರಳುತ್ತಿದ್ದ ಅನೇಕ ಪರೀಕ್ಷಾರ್ಥಿಗಳು ಕೂಡ ರೈಲು ಸಂಚಾರ ಸ್ಥಗಿತಗೊಂಡ ಕಾರಣ ತೀವ್ರ ತೊಂದರೆ ಅನುಭವಿಸಿದರು. ಅವರಿಗೆ ಹಣ ಮರುಪಾವತಿ ಹಾಗೂ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಭಾರೀ ಮಳೆಯಿಂದಾಗಿ ಈ ಪ್ರದೇಶಗಳಲ್ಲಿ ಭೂಕುಸಿತ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಹಳಿ ಪುನಃಸ್ಥಾಪನೆ ಕಾರ್ಯ ಸವಾಲಿನದ್ದಾಗಿದೆ. ಹಳಿ ಮೇಲಿನ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸಲು ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ಅಗತ್ಯ ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ರೈಲು ಸಂಚಾರವನ್ನು ಶೀಘ್ರದಲ್ಲಿ ಪುನಃರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಗುಂಡ್ಯ ನದಿ, ಕಕ್ಕಿನಹೊಳೆ, ಕಪಿಲಾ ನದಿ, ಕುಮಾರಧಾರಾ, ಫಲ್ಗುಣಿ, ಪಯಸ್ವಿನಿ ನದಿಗಳು ಸೇರಿದಂತೆ ಎಲ್ಲಾ ನದಿಗಳೂ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿವೆ. ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ಕಡೆ ರಸ್ತೆಗಳು, ಕೃಷಿ ಭೂಮಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ.

ಮಲೆನಾಡಿನಲ್ಲಿ ಮಳೆ ಅಬ್ಬರ

ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಉಡುಪಿ, ಬೆಳಗಾವಿ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಕರಾವಳಿ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.


ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುಡ್ಡ ಕುಸಿತ ಮತ್ತು ನದಿಗಳು ಉಕ್ಕಿ ಹರಿಯುವ ಭೀತಿ ಹೆಚ್ಚಿದ್ದು ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.


ಉತ್ತರ ಕನ್ನಡ, ಉಡುಪಿ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗಂಟೆಗೆ ೫೦ ರಿಂದ ೬೦ ಕಿ.ಮೀ ವೇಗದ ಬಿರುಗಾಳಿ ಬೀಸುತ್ತಿದ್ದು, ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ತೀರದಲ್ಲಿ ಗಂಟೆಗೆ ೪೦ ರಿಂದ ೫೦ ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಡಿಸಿ ಜೊತೆ ಡಿಸಿಎಂ ಚರ್ಚೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಶೆಡ್ ನಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇನ್ನೂ ಕೆಲವರು ಗಂಭೀರ ಗಾಯಗೊಂಡಿರುವ ವಿಚಾರ ತಿಳಿದು ಆಘಾತವಾಯಿತು. ಕೂಲಿ ಅರಸಿ ದೂರದ ಊರಿನಿಂದ ಬಂದು ನೆಲೆಸಿದ್ದ ಬಡಕುಟುಂಬವೊಂದು ಹೀಗೆ ದುರಂತ ಅಂತ್ಯ ಕಂಡಿದ್ದು ದುರದೃಷ್ಟಕರ ಎಂದು
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ ಪರಮೇಶ್ವರ್ ದುಃಖ ವ್ಯಕ್ತಪಡಿಸಿದ್ದಾರೆ .


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,ಈಗಾಗಲೇ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಪರಿಹಾರ ಕಾರ್ಯ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸುವಂತೆ ಸೂಚನೆ ನೀಡಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬದವರ ಜೊತೆ ಸರ್ಕಾರ ನಿಲ್ಲಲಿದೆ. ಎಂದಿದ್ದಾರೆ.

ಪಕ್ಕದ ಶೆಡ್‌ನಲ್ಲಿದ್ದವರಿಗೆ ಗಾಯ
ಗುಡ್ಡ ಕುಸಿತ ಘಟನೆಯಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶೆಡ್ ಮೇಲೂ ಮಣ್ಣು ಬಿದ್ದಿದ್ದು, ಅದರಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ. ಮಣ್ಣಿನಡಿ ಸಿಲುಕಿ ನರಳಾಡುತ್ತಿದ್ದ ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ, ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದೆ.


ಇನ್ನು ಘಟನೆ ಬಗ್ಗೆ ಸ್ಥಳೀಯ ರತ್ನಾಕರ್ ಮಾತನಾಡಿ, ಮಳೆಯಿಂದ ಗುಡ್ಡ ಕುಸಿತವಾಗಿದ್ದು, ಶೆಡ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಗಾಂಧಿನಗರ ಬಡಾವಣೆಯ ರಮೇಶ್ ಎಂಬ ಗುತ್ತಿಗೆದಾರರ ಬಳಿ ಕೊಪ್ಪಳ ಹಾಗೂ ದಾವಣಗೆರೆಯ ಕೆಲ ಕುಟುಂಬದವರು ಹಲವು ವರ್ಷಗಳಿಂದ ಮಣ್ಣಿನ ಕೆಲಸ ಮಾಡಲು ಬಂದಿದ್ದರು. ಮಳೆಯಿಂದ ಗುಡ್ಡ ಕುಸಿತವಾಗಿದೆ. ಇದರಲ್ಲಿ ಕೊಪ್ಪಳದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದರು.


ಇದರಲ್ಲಿ ಹನುಮಂತ ಎಂಬಾತ ಮಣ್ಣಿನಡಿ ಸಿಲುಕಿ ಕೊಂಡಿದ್ದನು. ಈತನನ್ನು ಎರಡು ಗಂಟೆ ಕಾರ್ಯಾಚರಣೆ ನಡೆಸಿ, ರಕ್ಷಿಸಿ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನಿಗೆ ಬಿಪಿ ಕಡಿಮೆಯಾಗಿರುವ ಕಾರಣಕ್ಕೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಗುಡ್ಡದ ಮೇಲೆ ಇರುವ ರೆಹಮಾತುಲ್ಲ ಮನೆಯ ಕಾಂಪೌಂಡ್ ಸಹ ಕುಸಿತವಾಗಿದೆ. ಅವರ ಮನೆ ಸಹ ಕುಸಿತವಾಗುವ ಭಯದಲ್ಲಿದ್ದಾರೆ. ಮೃತ ಕುಟುಂಬದವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಪರಿಹಾರ ನೀಡಬೇಕೆಂದು ಸ್ಥಳೀಯ ರತ್ನಾಕರ ಆಗ್ರಹಿಸಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ಕೊಡಿ

ಮೂರು ಜನ ಗಂಗಾವತಿ ತಾಲೂಕಿನ ಕಾರ್ಮಿಕರು ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಇನ್ನು ಬೇರೆ ಸಿಲುಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.


ಘಟನಾ ಸ್ಥಳದಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಮಾತನಾಡಿ, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೋರಿದ್ದೇನೆ. ಈಗಾಗಲೇ ಗುಡ್ಡದ ಪಕ್ಕದಲ್ಲಿ ವಾಸಿಸುತ್ತಿದ್ದ ಸುಮಾರು ೮ ಕುಟುಂಬಗಳಿಗೆ ಸ್ಥಳಾಂತರಿಸಿದ್ದೇವೆ. ಒಬ್ಬ ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಾಯಕಾರಿ ಸ್ಥಳದಿಂದ ಇನ್ನೂ ಕೆಲವರನ್ನು ಸ್ಥಳಾಂತರಿಸಲು ಯೋಚಿಸಿದ್ದೇವೆ ಎಂದರು.
ಈ ರೀತಿಯ ಘಟನೆಗಳು ಆಗಬಾರದು. ಆದರೆ ಪ್ರಕೃತಿಯ ಬಗ್ಗೆ ಹೇಳಲು ಆಗಲ್ಲ. ಅಲ್ಲಿ ಬರ ಇರುವ ದೂರದ ಗಂಗಾವತಿ, ಹೊಳಲ್ಕೆರೆ ಭಾಗದಿಂದ ಕೂಲಿ ಕೆಲಸಕ್ಕೆ ಇಲ್ಲಿಗೆ ಬಂದಿದ್ದಾರೆ. ನಾನು ಅನೇಕ ಬಾರಿ ಇಲ್ಲಿಗೆ ಬಂದಾಗ ಗುಡ್ಡದ ಕೆಳಗೆ ಮನೆ ಕಟ್ಟಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.