Home ಜಿಲ್ಲೆ ಜಿಲ್ಲಾಡಳಿತ ವಶಪಡಿಸಿಕೊಂಡ ಮರಳೇ ಕಳ್ಳತನ: ತಪ್ಪಿತಸ್ಥರನ್ನು ಪತ್ತೆಹಚ್ಚಿ ಜೈಲಿಗೆ ಕಳುಹಿಸಿ

ಜಿಲ್ಲಾಡಳಿತ ವಶಪಡಿಸಿಕೊಂಡ ಮರಳೇ ಕಳ್ಳತನ: ತಪ್ಪಿತಸ್ಥರನ್ನು ಪತ್ತೆಹಚ್ಚಿ ಜೈಲಿಗೆ ಕಳುಹಿಸಿ

ವಡಗೇರಾ: ಜಿಲ್ಲಾಡಳಿತ ವಶಪಡಿಸಿಕೊಂಡಿದ್ದ ಅಕ್ರಮ ಮರಳನ್ನು ಮತ್ತೆ ಕಾನೂನುಬಾಹಿರವಾಗಿ ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥರನ್ನು ಕೂಡಲೇ ಪತ್ತೆಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ವಡಗೇರಾ ತಾಲೂಕಿನ ಗೊಂದೆನೂರ ಗ್ರಾಮದ ಕೃಷ್ಣಾ ನದಿ ಪ್ರದೇಶದಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಈ ಹಿಂದೆ ತಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಿಶೇಷ ತನಿಖಾ ತಂಡ ರಚಿಸಿ ನದಿ ಪಕ್ಕದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ತನಿಖಾ ತಂಡ ರಚಿಸಿದ ಬಳಿಕ ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ತನಿಖಾ ತಂಡದ ಸಮ್ಮುಖದಲ್ಲಿ ಜಿಲ್ಲಾಡಳಿತದ ವಶಕ್ಕೆ ಪಡೆದಿದ್ದರು. ಆದರೆ, ಮರಳು ವಶಪಡಿಸಿಕೊಂಡ ಬಳಿಕ ಸಂಬAಧಪಟ್ಟ ಅಧಿಕಾರಿಗಳು ಸ್ಥಳದ ಮೇಲೆ ಸಮರ್ಪಕ ನಿಗಾ ವಹಿಸದಿರುವುದರಿಂದ ಕೆಲವರು ಅದೇ ಮರಳನ್ನು ಕಾನೂನುಬಾಹಿರವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ.

ಈ ಕುರಿತು ವಡಗೇರಾ ತಹಶೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಸರ್ಕಾರದ ವಶದಲ್ಲಿರುವ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಅಕ್ರಮ ಮರಳು ಸಾಗಾಟಕ್ಕೆ ಯಾರಾದರೂ ಅಧಿಕಾರಿಗಳು ಸಹಕರಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಮೇಶ ಕೆ. ಮುದ್ನಾಳ್ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಜಿಲ್ಲಾಡಳಿತ ವಶಪಡಿಸಿಕೊಂಡ ಮರಳನ್ನು ಅಕ್ರಮವಾಗಿ ಸಾಗಿಸಿರುವ ವ್ಯಕ್ತಿಗಳು ಹಾಗೂ ಬಳಸಿದ ವಾಹನಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು. ಜತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಸರ್ಕಾರಿ ವಶದಲ್ಲಿರುವ ಮರಳಿಗೂ ರಕ್ಷಣೆ ಇಲ್ಲದಿದ್ದರೆ ಅಕ್ರಮ ಮರಳು ದಂಧೆಗೆ ಕಡಿವಾಣ ಹೇಗೆ ಸಾಧ್ಯ? ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಉಮೇಶ ಕೆ. ಮುದ್ನಾಳ್ ಒತ್ತಾಯಿಸಿದ್ದಾರೆ.