
ಬೆಂಗಳೂರು, ಜೂ. ೨೦- ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ -ಯುಜಿ ಮರುಪರೀಕ್ಷೆ ನಾಳೆ ದೇಶಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ನಡುವೆ ನಡೆಯಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಯಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಬಾರಿ ಹಲವು ಹೊಸ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.
ಈ ಬಾರಿ ದೇಶಾದ್ಯಂತ ೧೬ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಂಡಿದ್ದು, ಕರ್ನಾಟಕದ ಬೆಂಗಳೂರು ಸೇರಿದಂತೆ ೩೧ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.
ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫:೧೫ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಪರೀಕ್ಷೆಯ ಅವಧಿಯನ್ನು ೧೫ ನಿಮಿಷ ವಿಸ್ತರಿಸಿ ಒಟ್ಟು ೧೯೫ ನಿಮಿಷ ನಿಗದಿಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರವನ್ನು ಮಧ್ಯಾಹ್ನ ೧:೩೦ಕ್ಕೆ ಮುಚ್ಚಲಾಗುತ್ತದೆ. ತಡವಾಗಿ ಬರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ
ಪ್ರತಿ ಅಭ್ಯರ್ಥಿಯೂ ಪರೀಕ್ಷಾ ಕೇಂದ್ರದಲ್ಲಿ ದೈಹಿಕ ತಪಾಸಣೆ, ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ ಮೂಲಕ ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ. ಎನ್‌ಟಿಎ ನಿಗದಿಪಡಿಸಿರುವ ಡ್ರೆಸ್ ಕೋಡ್ ಪಾಲಿಸುವುದು ಕಡ್ಡಾಯವಾಗಿದೆ.
ಭದ್ರತೆಯಲ್ಲಿ ಹೊಸ ಕ್ರಮಗಳು:
ಪ್ರಶ್ನೆಪತ್ರಿಕೆಗಳ ಸಾಗಾಟವನ್ನು ಭಾರತೀಯ ವಾಯುಪಡೆಯ ಮೂಲಕ ನಡೆಸಲಾಗಿದ್ದು, ಕೇಂದ್ರ ಸಶಸ್ತ್ರ ಪಡೆಗಳಾದ ಅಖPಈ ಹಾಗೂ ಅISಈ ಭದ್ರತೆ ಒದಗಿಸಿವೆ. ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್, ಆಧಾರ್-ಸಂಬಂಧಿತ ಬಯೋಮೆಟ್ರಿಕ್ ಪರಿಶೀಲನೆ, ಲೈವ್ ಫೇಸ್ ರೆಕಗ್ನಿಷನ್ ಹಾಗೂ ಎಐ ಆಧಾರಿತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಯನ್ನು ನಾಲ್ಕು ಹಂತದ ಸಿಸಿಟಿವಿ ಮೂಲಕ ಕೇಂದ್ರ ಕಚೇರಿಯಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತದೆ.
ಸೋರಿಕೆ ತಡೆಗೆ ವಿಶೇಷ ನಿಗಾ
ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಸುದ್ದಿ ಹಾಗೂ ವದಂತಿಗಳನ್ನು ತಡೆಯಲು ಎನ್‌ಟಿಎ ವಿಶೇಷ ಜಾಗ್ರತಾ ದಳವನ್ನು ರಚಿಸಿದೆ. ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಒಟ್ಟಾರೆ, ಕಳೆದ ವರ್ಷದ ವಿವಾದಗಳ ಬಳಿಕ ಈ ಬಾರಿಯ ನೀಟ್ ಮರುಪರೀಕ್ಷೆಯನ್ನು ಸಂಪೂರ್ಣ ನ್ಯಾಯಸಮ್ಮತ, ಪಾರದರ್ಶಕ ಹಾಗೂ ಅಕ್ರಮ ಮುಕ್ತವಾಗಿ ನಡೆಸಲು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಉನ್ನತ ಮಟ್ಟದ ಮೇಲ್ವಿಚಾರಣೆ ಕೈಗೊಂಡಿವೆ. ಅಭ್ಯರ್ಥಿಗಳು ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





























