Home Lead News ಚೈತನ್ಯಕ್ಕೆ ಯೋಗ ಮದ್ದು

ಚೈತನ್ಯಕ್ಕೆ ಯೋಗ ಮದ್ದು

ಕೊಲ್ಕತ್ತಾ, ಜೂ. ೨೧- ಯೋಗವು ಕೇವಲ ದೇಹವನ್ನು ಸದೃಢಗಳಿಸುವ ಸಾಧನಾವಲ್ಲ. ಆರೋಗ್ಯಕರ ಮತ್ತು ಚೈತನ್ಯಭರಿತ ವೃದ್ಧಾಪ್ಯಕ್ಕೆ ದಾರಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರಮೋದಿ ವರ್ಣಿಸಿದ್ದಾರೆ.


೭೦ರ ವಯಸ್ಸಿನಲ್ಲಿ ೫೦ ವರ್ಷ ವಯಸ್ಸಿಗಿಂತ ಹೆಚ್ಚು ಆರೋಗ್ಯವಂತಾಗಿರಬೇಕು. ಆದ್ದರಿಂದ ಯೋಗವನ್ನು ಒಂದು ದಿನಕ್ಕೆ ಸಿಮೀತಗೊಳಿಸಬೇಡಿ. ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ದೇಶದ ಜನತೆಗೆ ಅವರು ಕರೆ ನೀಡಿದ್ದಾರೆ.


ಅಂತಾರಾಷ್ಟ್ರೀಯ ಯೋಗದಿನವಾದ ಇಂದು ಕೊಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಎಂಬ ಈ ವರ್ಷದ ವಿಷಯವನ್ನು ಉಲ್ಲೇಖಿಸಿದರು. ವಯಸ್ಸು ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದರೂ ಆರೋಗ್ಯ ಮತ್ತು ಸಾಮರ್ಥ್ಯ ಕುಗ್ಗುವುದು ಅನಿವಾರ್ಯ ಅಲ್ಲ ಎಂದರು.


ನಮ್ಮ ಗುರಿ ೭೦ರ ವಯಸ್ಸಿನಲ್ಲಿ ೫೦ರ ವಯಸ್ಸಿಗಿಂತ ಹೆಚ್ಚು ಜೀವನ ಶೈಲಿ ಖಾಯಿಲೆಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದಾಗಿರಬೇಕು. ೪೦ರ ವಯಸ್ಸಿನಲ್ಲಿ ೨೦ರ ವಯಸ್ಸಿಗಿಂತ ಹೆಚ್ಚು ಲವಲವಿಕೆ, ೫೦ರ ವಯಸ್ಸಿನಲ್ಲಿ ೩೦ರ ವಯಸ್ಸಿಗಿಂತ ಹೆಚ್ಚು ಚೈತನ್ಯ ಹೊಂದಿರಬೇಕು. ಯೋಗವು ಈ ಗುರಿಗಳನ್ನು ಸಾಧಿಸಲು ನೆರವಾಗುವ ಶಕ್ತಿಶಾಲಿ ಸಾಧನಾವಾಗಿದೆ ಎಂದು ಹೇಳಿದರು.


ಇತ್ತೀಚಿನ ವರ್ಷಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು, ಸ್ಥೂಲಕಾಯ ಹಾಗೂ ಒತ್ತಡದಿಂದ ಉಂಟಾಗುವ ಅನಾರೋಗ್ಯ ವೇಗವಾಗಿ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೋದಿ ಇಂತಹ ಜೀವನಶೈಲಿ ಖಾಯಿಲೆಗಳಿಂದ ದೂರವಿರಲು ಯೋಗ ಅತ್ಯಂತ ಪರಿಣಾಮಕಾರಿ ಎಂದು ಹೇಳಿದರು.
ನಿಯಮಿತ ಯೋಗ ಅಭ್ಯಾಸದಿಂದ ದೇಹದ ಲವಲವಿಕೆ ಹೆಚ್ಚಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಯೋಗ ಕೇವಲ ದೈಹಿಕ ವ್ಯಾಯಮವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸುವ ಸಮಗ್ರ ಜೀವನ ಪದ್ಧತಿಯಾಗಿದೆ ಎಂದರು.


ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಯೋಗದಿಂದ ಆರೋಗ್ಯ ಮಾತ್ರ ನೀಡುವುದಿಲ್ಲ. ಅದು ಜೀವನವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಹೀಗಾಗಿ ಯೋಗದ ಮೂಲಕ ನಾವು ದೈಹಿಕವಾಗಿ ಸದೃಢವಾಗುವುದರ ಜೊತೆಗೆ ಮಾನಸಿಕವಾಗಿ ಶಾಂತ ಮತ್ತು ಸಮತೋಲನ ವ್ಯಕ್ತಿಗಳಾಗಬಹುದು ಎಂದು ತಿಳಿಸಿದರು.


ಯೋಗ ದಿನವನ್ನು ಕೇವಲ ಒಂದುದಿನ ಆಚರಣೆಗೆ ಸಿಮೀತ ಮಾಡಬಾರದು. ಪ್ರತಿಯೊಬ್ಬರು ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ಮಕ್ಕಳು, ಕುಟುಂಬದಸದಸ್ಯ ಮತ್ತು ಯುವ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸಿ, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದ ಐಕಾನಿಕ್ ರೆಡ್ ರೋಡ್‌ನಿಂದ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಗ ದಿನಾಚಾರಣೆ ಮುನ್ನೆಡೆಸಿದರೆ ರಾಷ್ಡ್ರಪತಿ,ಉಪ ರಾಷ್ಡ್ರಪತಿ, ಕೇಂದ್ರದ ಹಲವು ಸಚಿವರು,ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಚಿವರು ಯೋಗ ದಿನಾಚಾರಣೆ ಕಾರ್ಯಕ್ರ.ಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಜಗತ್ತಿನ ವಿವಿಧ ದೇಶ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳು ವಿವಿಧ ದೇಶಗಳಲ್ಲಿ ಸಾವಿರಾರು ಸ್ಥಳಗಳಲ್ಲಿ ಯೋಗ ದಿನಾಚರಣೆ ನಡೆಯಿತು.