Home ಜಿಲ್ಲೆ ಬೆಂಗಳೂರು ಖಾಸಗಿ ಸಂಸ್ಥೆಗಳಿಗೂ ವಿಕಲಚೇತನರ ಕಾಯ್ದೆ ಅನ್ವಯ

ಖಾಸಗಿ ಸಂಸ್ಥೆಗಳಿಗೂ ವಿಕಲಚೇತನರ ಕಾಯ್ದೆ ಅನ್ವಯ

ಬೆಂಗಳೂರು,ಜೂ.೧೨-ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅಡಿಯಲ್ಲಿ ರಾಜ್ಯ ವಿಕಲಚೇತನರ ಆಯುಕ್ತರು ಪರಿಹಾರ ನೀಡುವಂತೆ ಖಾಸಗಿ ಸಂಸ್ಥೆಗಳಿಗೂ ನಿರ್ದೇಶನ ನೀಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.


ಸಂತ್ರಸ್ತ ಶಿಕ್ಷಕಿಗೆ ಪರಿಹಾರ ನೀಡಲು ವಿಕಲಚೇತನರ ರಾಜ್ಯ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ಯ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಆಯುಕ್ತರು ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.


ಅಲ್ಲದೆ, ಸಂತ್ರಸ್ತರಾಗಿರುವ ಶಿಕ್ಷಕಿಗೆ ಆಯುಕ್ತರು ನೀಡಿದ ೧೦ ಲಕ್ಷ ರೂ. ಪರಿಹಾರ ದಂಡವಲ್ಲ, ಬದಲಿಗೆ ಶಿಕ್ಷಕಿಗೆ ಆಗಿರುವ ೪೬ ಲಕ್ಷ ರೂ.ಗೂ ಅಧಿಕ ವೈದ್ಯಕೀಯ ವೆಚ್ಚಕ್ಕೆ ಹೋಲಿಸಿದರೆ ಇದು ಅತ್ಯಂತ ನ್ಯಾಯಸಮ್ಮತವಾದ ಕನಿಷ್ಠ ಪರಿಹಾರವಾಗಿದೆ ಎಂದು ತಿಳಿಸಿರುವ ನ್ಯಾಯಪೀಠ, ಶಾಲಾ ಆಡಳಿಯ ಮಂಡಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.


ಶಿಕ್ಷಕಿ ಬರ್ನಾಲಿ ರಾವತ್ ಅವರಿಗೆ ತಕ್ಷಣವೇ ಲಿಖಿತವಾಗಿ ಮರು ನೇಮಕಾತಿ ಆದೇಶ ನೀಡಬೇಕು. ಅವರಿಗೆ ನೆಲಮಹಡಿಯಲ್ಲೇ ವ್ಹೀಲ್ ಚೇರ್ ಚಲಿಸಬಹುದಾದ ತರಗತಿ ಕೋಣೆಯನ್ನು ನೀಡಬೇಕು, ವಿಕಲಚೇತನ ಸ್ನೇಹಿ ಶೌಚಾಲಯ ಒದಗಿಸಬೇಕು, ಮಾಸಿಕ ೧೫,೦೦೦ ರೂ. ವಾಹನ ಭತ್ಯೆ ನೀಡಬೇಕು, ಪ್ರತಿ ಎರಡು ತಾಸುಗಳ ಬಳಿಕ ೧೫ ನಿಮಿಷಗಳ ವಿಶ್ರಾಂತಿ ನೀಡಬೇಕು ಮತ್ತು ದೈಹಿಕವಾಗಿ ಬರಲು ಸಾಧ್ಯವಾಗದ ದಿನಗಳಲ್ಲಿ ಆನ್ಲೈನ್ ಮೂಲಕ ಪಾಠ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ.


ರಾಜ್ಯ ಸರ್ಕಾರಕ್ಕೆ ನಿರ್ದೇಶನ:
ರಾಜ್ಯದ ಸಾರ್ವಜನಿಕ ಮೂಲಸೌಕರ್ಯಗಳನ್ನು ವಿಕಲಚೇತನ ಸ್ನೇಹಿಯನ್ನಾಗಿ ಮಾಡಲು ನ್ಯಾಯಪೀಠ ಕಟ್ಟುನಿಟ್ಟಾದ ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಜಾರಿಗೆ ಆದೇಶಿಸಿದೆ. ಈ ಎಸ್‌ಒಪಿ ಎಲ್ಲಾ ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಾರಿಗೆ ನಿಲ್ದಾಣಗಳು, ಧಾರ್ಮಿಕ ಮತ್ತು ವಸತಿ ಸಮುಚ್ಚಯಗಳಿಗೆ ಕಡ್ಡಾಯವಾಗಿ ಜಾರಿ ಮಾಡಬೇಕು ಎಂದು ಹೇಳಿದೆ.


ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯ ಪ್ರವೇಶಾಧಿಕಾರ ಪ್ರಾಧಿಕಾರ ಮತ್ತು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಸಮಿತಿಗಳನ್ನು ರಚನೆ ಮಾಡಬೇಕು. ವಿಕಲಚೇತನರ ಕಾಯ್ದೆಯ ಸೆಕ್ಷನ್ ೪೪ ಮತ್ತು ಕೇಂದ್ರ ಸರ್ಕಾರದ ‘ಹಾರ್ಮೋನೈಸ್ಡ್ ಗೈಡ್ಲೈನ್ಸ್ ೨೦೨೧’ ರ ಪ್ರಕಾರ ಕಟ್ಟಡ ನಿರ್ಮಾಣವಾಗಿಲ್ಲದಿದ್ದರೆ, ಯಾವುದೇ ಸಾರ್ವಜನಿಕ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಬಾರದು. ಸಾರ್ವಜನಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ವಿಕಲಚೇತನ ಸ್ನೇಹಿ ನಿಯಮಗಳ ಪಾಲನೆಯೇ ಕಡ್ಡಾಯ ಷರತ್ತುಗಳಾಗಿರಬೇಕು ಎಂದು ಪೀಠ ತಿಳಿಸಿದೆ.


ಮೆಟ್ಟಿಲು ರಹಿತ ಮಾರ್ಗ:

ಸಾರ್ವಜನಿಕ ರಸ್ತೆ/ಪಾದಚಾರಿ ಮಾರ್ಗದಿಂದ ಕಟ್ಟಡದ ಪ್ರಮುಖ ಭಾಗಕ್ಕೆ ಕನಿಷ್ಠ ಒಂದು ಮೆಟ್ಟಿಲು ರಹಿತ ಮಾರ್ಗವಿರಬೇಕು. ರಾಂಪ್ಗಳ ಇಳಿಜಾರು ಪ್ರಮಾಣದಲ್ಲಿರಬೇಕು. ಇಕ್ಕೆಲಗಳಲ್ಲೂ ಹ್ಯಾಂಡ್ ರೈಲ್ ಗಳು ಮತ್ತು ಜಾರದ ಮೇಲ್ಮೈ ಇರಬೇಕು. ಕಟ್ಟದಲ್ಲಿನ ಒಟ್ಟು ಪಾರ್ಕಿಂಗ್ ಜಾಗದ ಕನಿಷ್ಠ ಶೇ.೨ ರಷ್ಟು ಅಥವಾ ಕನಿಷ್ಠ ೧ ಜಾಗವನ್ನು (ಯಾವುದು ಹೆಚ್ಚೋ ಅದು) ವಿಕಲಚೇತನರಿಗೆ ಮೀಸಲಿಡಬೇಕು. ಮಾಲ್‌ಗಳು, ವಿಮಾನ ನಿಲ್ದಾಣಗಳಂತಹ ಕಡೆ ಕನಿಷ್ಠ ೪ ಜಾಗಗಳಿರಬೇಕು. ವ್ಹೀಲ್ ಚೇರ್ ಬಳಕೆಗೆ ಅನುಕೂಲವಾಗಲು ಪಾರ್ಕಿಂಗ್ ಇರಬೇಕು ಮತ್ತು ಅಲ್ಲಿ ಅಂತಾರಾಷ್ಟ್ರೀಯ ವಿಕಲಚೇತನರ ಚಿಹ್ನೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಪೀಠ ಹೇಳಿದೆ.


ರಾಜ್ಯ ಸರ್ಕಾರವು ತಕ್ಷಣವೇ ಈ ನಿಯಮಾವಳಿಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು, ಇದರ ಉಸ್ತುವಾರಿಗಾಗಿ ಪ್ರತಿ ಇಲಾಖೆಯಲ್ಲೂ ಕಡ್ಡಾಯವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಪೀಠ ತಿಳಿಸಿದೆ.