
ಕೆಂಗೇರಿ, ಅ. ೫ : ಹಳ್ಳಿಕಾರ ಸಮುದಾಯವನ್ನು ಪ್ರವರ್ಗ -೧ಕ್ಕೆ ಸೇರಿಸಲಾಗುವುದು. ಇದರಿಂದ ನಿರ್ಲಕ್ಷಕ್ಕೆ ಒಳಗಾದವರಿಗೆ ಸಹಾಯ ವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.
ಶ್ರೀಮತಿ ರಂಗಮ್ಮ, ಶ್ರೀ ಮುನಿರಂಗಪ್ಪ ( ಆರ್. ಎಂ. ಆರ್.) ಹಳ್ಳಿಕಾರ್ ಫೌಂಡೇಶನ್ ಟ್ರಸ್ಟ್ ರಾಜಮಟ್ಟದ ೨೦೨೫-೨೦೨೬ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾದ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಸಂಸ್ಕಾರ, ಸಂಸ್ಕೃತಿ ಉಳಿಸುವ, ಸಮಾಜಕ್ಕೆ ಒಳಿತಾಗುವ ಶಿಕ್ಷಣ ಹಾಗೂ ಉತ್ತಮ ಶಿಕ್ಷಣ ಪಡೆದ ಪ್ರತಿಭಾವಂತರಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದರು.
ದೊಡ್ಡ ಸಮುದಾಯಗಳು, ಸಣ್ಣ ಸಮುದಾಯಗಳನ್ನು ನುಂಗಿ ಹಾಕುತ್ತಿವೆ. ಸಣ್ಣ ಸಮುದಾಯಗಳು ನಿರ್ಲಕ್ಷಕ್ಕೆ ಒಳಗಾಗಿದ್ದವು, ಚಿನ್ನಸ್ವಾಮಿ, ವೆಂಕಟಸ್ವಾಮಿ, ಕಾಂತರಾಜು ಆಯೋಗಗಳನ್ನು ನೇಮಕ ಮಾಡಿ ನಿರ್ಲಕ್ಷಕ್ಕೆ ಒಳಗಾದ ಅತಿ ಹಿಂದುಳಿದ ಸಣ್ಣ ಸಮುದಾಯ, ಪರಿಶಿಷ್ಟ ಜಾತಿ ವರ್ಗಗಳಿಗೆ ಸಹಾಯವನ್ನು ಸರ್ಕಾರಗಳು ಮಾಡುತ್ತಿವೆ. ಅತಿ ಕಡಿಮೆ ಜನಸಂಖ್ಯೆ ಇರುವ ಹಳ್ಳಿಕಾರ ಸಮುದಾಯವನ್ನು ಪ್ರಾವರ್ಗ ೧ ಕ್ಕೆ ನಮ್ಮ ಸರ್ಕಾರ ಸೇರಿಸಲಿದೆ ಎಂದು ಭರವಸೆ ನೀಡಿದ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆಯಲ್ಲಿ ಚರ್ಚಿಸಿ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದರು.
ಸಂವಿಧಾನದಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂದರು. ಶಿಕ್ಷಣ ಕ್ಷೇತ್ರದ ಕ್ರಾಂತಿಯ ಹರಿಕಾರ, ಮಾರ್ಗದರ್ಶಕರಾಗಿ ಶೈಕ್ಷಣಿಕ ಪ್ರಗತಿಗೆ ೨೫೦೦ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸುಮಾರು ೭ ಕೋಟಿ ರೂಪಾಯಿಗಳನ್ನು ಪ್ರತಿಭಾ ಪುರಸ್ಕಾರವಾಗಿ ನೀಡುತ್ತಿರುವ ಕೆ.ಎಂ. ನಾಗರಾಜ್ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್.ಎಂ.ಆರ್. ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ಜಾತಿ ಗಣತಿ ವರದಿ ಮೇರೆಗೆ ನಿರ್ಲಕ್ಷಕ್ಕೆ ಒಳಗಾದ ಸಣ್ಣ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು, ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿ ರೂಪಿಸಬೇಕು ಎಂದು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ರಾಜ್ಯದ ೧೦ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಸಹಾಯಹಸ್ತ ಚಾಚುತ್ತಿದೆ ಎಂದರು.
ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಪೋಷಕರು ವಹಿಸಿರುವ ಶ್ರಮಕ್ಕೆ ಪೂರಕವಾಗಿ ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ ಸೇವಾ ಕಾರ್ಯ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ ಹಳ್ಳಿಕಾರ ಸಮಾಜವನ್ನು ಮುಂಚೂಣಿಗೆ ತರುವಲ್ಲಿ ನಾಗರಾಜ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ರೈತ ಕುಟುಂಬಗಳಿಗೆ ನೆರವಾಗಲು ದೊಡ್ಡ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಪೂರ್ಣ ಅಂಕ ಪಡೆದ ೬ ವಿದ್ಯಾರ್ಥಿಗಳಿಗೆ ತಲಾ ೨೫ ಸಾವಿರ, ಶೇ.೯೦ಕ್ಕಿಂತ ಹೆಚ್ಚಿನ ಅಂಕ ಪಡೆದ ೭೬ ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ, ಉತ್ತಮ ಅಂಕ ಪಡೆದ ಸಮುದಾಯದ ೮೫೦ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂಪಾಯಿಗಳನ್ನು ವಿತರಣೆ ಮಾಡಲಾಯಿತು.ಜೊತೆಗೆ ಪೋಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವ ಟಿ. ರಘುಮೂರ್ತಿ, ಶಾಸಕರಾದ ಟಿ.ಬಿ. ಜಯಚಂದ್ರ, ಪುಟ್ಟಣ್ಣ,ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಆರ್. ವಾಸುದೇವ್, ಪೂರ್ಣಿಮಾ ಕಲ್ಯಾಣ ಮಂಟಪ ಮಾಲೀಕ ಎಂ. ಶಿವಕುಮಾರ್, ಮಾಜಿ ಉಪಮಹಾಪೌರ ಬಿ.ಎಸ್. ಪುಟ್ಟರಾಜು, ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್ ಮುಖಂಡ ಬಿ. ಮಲ್ಲಿಕಾರ್ಜುನ್, ಮುಖಂಡ ಕೆ. ಎನ್. ಹರೀಶ್ ಬಿಬಿಎಂಪಿ ಮಾಜಿ ಸದಸ್ಯ ಸಿ. ದಾಸೇಗೌಡ, ಟ್ರಸ್ಟಿನ ಪದಾಧಿಕಾರಿಗಳಾದ ಮಾರುತಿ, ಎನ್. ನಾರಾಯಣ ಮೂರ್ತಿ, ಶ್ರೀನಿವಾಸ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು
























