
ಕಲಬುರಗಿ, ಜೂ. 24:ಸನಾತನ ಧರ್ಮದ ಮಹಾನ್ ದಾರ್ಶನಿಕ, ಯೋಗೀಶ್ವರ, ವೇದ ಪ್ರವರ್ತಕ ಹಾಗೂ ನ್ಯಾಯಶಾಸ್ತ್ರದ ಮಹಾಗುರುಗಳಾದ ಮಹರ್ಷಿ ಯಾಜ್ಞವಲ್ಕ್ಯರ ಜಯಂತಿಯನ್ನು ಕರುಣೇಶ್ವರ ನಗರದ ಜೈವೀರ ಹನುಮಾನ್ ದೇವಸ್ಥಾನದಲ್ಲಿ ಭಕ್ತಿ, ಶ್ರದ್ಧೆ ಮತ್ತು ವೈದಿಕ ಸಂಪ್ರದಾಯದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ವಿಶೇಷ ಉಪನ್ಯಾಸದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಂಶೋಧಕರಾದ ಶ್ರೀನಿವಾಸ್ ಸಿರನೂರಕರ್ ಅವರು ಮಹರ್ಷಿ ಯಾಜ್ಞವಲ್ಕರ ಜೀವನ, ಅವರ ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಕಾನೂನು ಕ್ಷೇತ್ರದ ಅಮೂಲ್ಯ ಕೊಡುಗೆಗಳ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲಿದರು.
ಅವರುಮಾತನಾಡಿ , ಮಹರ್ಷಿ ಯಾಜ್ಞವಲ್ಕ್ಯರು ಕೇವಲ ವೇದ ಋಷಿಗಳಲ್ಲ, ಭಾರತೀಯ ನಾಗರಿಕತೆಯ ಚಿಂತನಾ ಪರಂಪರೆಗೆ ಹೊಸ ದಿಕ್ಕು ತೋರಿದ ಮಹಾನ್ ದಾರ್ಶನಿಕರಾಗಿದ್ದರು ಎಂದು ಹೇಳಿದರು. ಗುರು ವೈಶಂಪಾಯನರ ಆಶ್ರಮದಲ್ಲಿ ವೇದಾಧ್ಯಯನ ಮಾಡಿದ ಯಾಜ್ಞವಲ್ಕ್ಯರು ತಮ್ಮ ಅದಮ್ಯ ತಪಸ್ಸಿನ ಮೂಲಕ ಸೂರ್ಯನಾರಾಯಣನಿಂದ ಶುಕ್ಲ ಯಜುರ್ವೇದವನ್ನು ಪ್ರಾಪ್ತಿಪಡಿಸಿ ಜಗತ್ತಿಗೆ ಹೊಸ ವೇದ ಪರಂಪರೆಯನ್ನು ನೀಡಿದರು ಎಂದು ವಿವರಿಸಿದರು.
ಜನಕ ಮಹಾರಾಜನ ಆಸ್ಥಾನದಲ್ಲಿ ನಡೆದ ಬಹುದಕ್ಷಿಣ ಯಾಗದಲ್ಲಿ ದೇಶದ ಶ್ರೇಷ್ಠ ವಿದ್ವಾಂಸರೊಂದಿಗೆ ವಾದ-ವಿವಾದ ನಡೆಸಿ ಬ್ರಹ್ಮಜ್ಞಾನದಲ್ಲಿ ಅಗ್ರಸ್ಥಾನ ಪಡೆದ ಘಟನೆ ಹಾಗೂ ಗಾರ್ಗಿ ವಾಚಕ್ನವಿ ಅವರೊಂದಿಗೆ ನಡೆಸಿದ ತಾತ್ವಿಕ ಸಂವಾದವು ಪ್ರಾಚೀನ ಭಾರತದ ಬೌದ್ಧಿಕ ಪರಂಪರೆಯ ಉನ್ನತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಮಹರ್ಷಿ ಯಾಜ್ಞವಲ್ಕ್ಯರು ರಚಿಸಿದ “ಯಾಜ್ಞವಲ್ಕ್ಯ ಸ್ಮೃತಿ” ಭಾರತೀಯ ನ್ಯಾಯಶಾಸ್ತ್ರದ ಮೂಲಾಧಾರ ಗ್ರಂಥಗಳಲ್ಲಿ ಒಂದಾಗಿದ್ದು, ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತ ಎಂಬ ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ. ನ್ಯಾಯಾಲಯದ ವ್ಯವಸ್ಥೆ, ನ್ಯಾಯಾಧೀಶರ ಕರ್ತವ್ಯ, ಸಾಕ್ಷ್ಯಾಧಾರಗಳ ಮಹತ್ವ ಹಾಗೂ ಸಾಮಾಜಿಕ ನ್ಯಾಯದ ಕುರಿತು ಈ ಗ್ರಂಥದಲ್ಲಿ ನೀಡಿರುವ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕದ ಹೆಮ್ಮೆಯ ವಿದ್ವಾಂಸರಾದ ವಿಜ್ಞಾನೇಶ್ವರರು ಯಾಜ್ಞವಲ್ಕ್ಯ ಸ್ಮೃತಿಯನ್ನು ಆಧರಿಸಿ ರಚಿಸಿದ “ಮಿತಾಕ್ಷರ” ಗ್ರಂಥವು ಭಾರತದ ಬಹುತೇಕ ಭಾಗಗಳಲ್ಲಿ ಶತಮಾನಗಳ ಕಾಲ ನ್ಯಾಯಶಾಸ್ತ್ರದ ಮಾನದಂಡವಾಗಿ ಬಳಕೆಯಲ್ಲಿತ್ತು. ಇದರಿಂದ ಕಲಬುರಗಿ ಜಿಲ್ಲೆಯ ಮತ್ತೂರು ಗ್ರಾಮವು ಭಾರತೀಯ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಯಾಜ್ಞವಲ್ಕ್ಯರ ವೈಜ್ಞಾನಿಕ ದೃಷ್ಟಿಕೋನವೂ ಅಪೂರ್ವವಾಗಿದ್ದು, ಗರ್ಭದಲ್ಲಿನ ಭ್ರೂಣದ ಬೆಳವಣಿಗೆ, ಮಾನವ ದೇಹದ ರಚನೆ ಹಾಗೂ ಜೀವಶಾಸ್ತ್ರದ ಅನೇಕ ಅಂಶಗಳ ಕುರಿತು ಅವರು ನೀಡಿರುವ ವಿವರಣೆಗಳು ಆಧುನಿಕ ವಿಜ್ಞಾನಕ್ಕೂ ಆಶ್ಚರ್ಯ ಉಂಟುಮಾಡುವಂತಿವೆ ಎಂದು ಶ್ರೀನಿವಾಸ್ ಸಿರನೂರಕರ್ ಹೇಳಿದರು.
ವೇದಕಾಲದಲ್ಲಿಯೇ ಮಹಿಳೆಯರಿಗೆ ಶಿಕ್ಷಣ, ಆಸ್ತಿ ಹಕ್ಕು ಹಾಗೂ ತಾತ್ವಿಕ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದವು ಎಂಬುದಕ್ಕೆ ಗಾರ್ಗಿ, ಮೈತ್ರೇಯಿ ಮತ್ತು ಕಾತ್ಯಾಯಿನಿಯಂತಹ ಮಹಾನ್ ಮಹಿಳೆಯರು ಸಾಕ್ಷಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಮಹರ್ಷಿ ಯಾಜ್ಞವಲ್ಕ್ಯರ ಬೃಹದಾರಣ್ಯಕ ಉಪನಿಷತ್, ಈಶಾವಾಸ್ಯೋಪನಿಷತ್ ಹಾಗೂ ಯಾಜ್ಞವಲ್ಕ ಸ್ಮೃತಿಗಳು ಇಂದಿಗೂ ಮಾನವ ಸಮಾಜಕ್ಕೆ ಮಾರ್ಗದರ್ಶಕ ಗ್ರಂಥಗಳಾಗಿದ್ದು, ಯುವ ಪೀಳಿಗೆ ಇವುಗಳ ಅಧ್ಯಯನದ ಮೂಲಕ ಭಾರತೀಯ ಸಂಸ್ಕøತಿಯ ನಿಜವಾದ ವೈಭವವನ್ನು ಅರಿಯಬೇಕಾಗಿದೆ ಎಂದು ಕರೆ ನೀಡಿದರು.
ಶ್ರೀಧರ ಜೋಶಿ ಅವರು ಶ್ರೀಯಾಜ್ಞವಲ್ಕರ ಕುರಿತು ಶುಶ್ರಾವ್ಯವಾದ ಸಂಗೀತ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಅವಿನಾಶ್ ಅವರು ಉಪಸ್ಥಿತರಿದ್ದು, ಯಾಜ್ಞವಲ್ಕರ ಚಿಂತನೆಗಳು ಆಧುನಿಕ ಸಮಾಜದಲ್ಲಿ ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಡಾ.ಶ್ರೀನಿವಾಸ್ ಜಹಾಗೀರದಾರ, ಶಾಮಾಚಾರ್ಯ ಜೋಶಿ ವನದುರ್ಗ, ಪದ್ಮನಾಭಾಚಾರ್ಯ ಜೋಶಿ, ಜಗನ್ನಾಥಾಚಾರ್ಯ ಸಗರ್, ಮಧುಸೂದನರಾವ್ ಕುಲಕರ್ಣಿ, ಗುರುರಾಜ ಅಗ್ನಿಹೋತ್ರಿ, ಸಮೀರ್ ಕುಲಕರ್ಣಿ, ಚಿದಂಬರ ದೇಶಪಾಂಡೆ, ಶಶಿಧರ್ ಜೋಷಿ, ಕಿಶನರಾವ್ ಕುಲಕರ್ಣಿ, ವಿಜಯಕುಮಾರ್ ಕುಲಕರ್ಣಿ, ರಾಘವೇಂದ್ರ ಜೋಶಿ, ಸುನಿಲ್ ಕುಲಕರ್ಣಿ, ಕಾರ್ಯಕ್ರಮವನ್ನು ಆರ್ ಕೆ ಕುಲಕರ್ಣಿ ನಿರೂಪಿಸಿದರು ಅವಿನಾಶ್ ಕುಲಕರ್ಣಿ ವಂದಿಸಿದರು
ದೇವಸ್ಥಾನದ ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕರಾದ ಚಂದ್ರಕಾಂತ್ ಕಡೆಗಂಚಿ ಸೇರಿದಂತೆ ಭಜನಾ ಮಂಡಳಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಪಾರಾಯಣ ಸಂಘದ ಸದಸ್ಯರು ಉಪಸ್ಥಿತರಿದ್ದರು.




















