Home ಜಿಲ್ಲೆ ಹೋಳಾ ಹಬ್ಬವು ದೇಶಿ-ಕೃಷಿ ಸಂಸ್ಕøತಿಯ ಜೀವಾಳ

ಹೋಳಾ ಹಬ್ಬವು ದೇಶಿ-ಕೃಷಿ ಸಂಸ್ಕøತಿಯ ಜೀವಾಳ

ಬೀದರ:ರೈತಾಪಿ ವರ್ಗದೊಂದಿಗೆ ಕೃಷಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ದುಡಿಯುವ ಎತ್ತುಗಳ ಬಗ್ಗೆ ರೈತರು ಕಾಳಜಿ, ಪೂಜನೀಯ ಮತ್ತು ಗೌರವಪೂರ್ವಕ ಕೃತಜ್ಞತಾ ಭಾವ ವ್ಯಕ್ತಪಡಿಸುವ ವಿಶೇಷ ಹಬ್ಬಗಳೆಂದರೆ “ಕಾರಹುಣ್ಣಿಮೆ” ಹಾಗೂ “ಹೋಳಾ” ಹಬ್ಬ. ಈ ಎರಡೂ ಹಬ್ಬಗಳಲ್ಲಿ ಸಾಮ್ಯತೆಯಿದೆ. ಬೀದರ ಜಿಲ್ಲೆಯಲ್ಲಿ ಕೆಲವೆಡೆ “ಕಾರಹುಣ್ಣಿಮೆ” ಮತ್ತು ಕೆಲವೆಡೆ “ಹೋಳಾ” ಹಬ್ಬವನ್ನು ಆಚರಿಸಲಾಗುತ್ತದೆ. ಮರಾಠಿಯ “ಪೋಳಾವೇ” ಕನ್ನಡದಲ್ಲಿ “ಹೋಳಾ” ಆಗಿದೆ. ಕನ್ನಡದ ಆಡು ಭಾಷೆಯಲ್ಲಿಯೂ ಬೀಜದ ಹೋರಿಗೆ ಪೋಳ್ ಎನ್ನುವುದು ವಾಡಿಕೆಯಿದೆ. ಕೃಷಿ ಮತ್ತು ದೇಶಿ ಸಂಸ್ಕøತಿಯ ಜೀವಾಳವಾಗಿರುವ ಈ ವರ್ಷದ ಹೋಳಾ ಹಬ್ಬವನ್ನು 2026ರ ಸೆಪ್ಟೆಂಬರ್ 10ರಂದು ಗುರುವಾರ ಆಚರಿಸಲಾಗುತ್ತದೆ.

ಹಬ್ಬದ ದಿನ ರೈತರು ಅರಿಶಿಣ ಮತ್ತು ಎಣ್ಣೆಯಿಂದ ಎತ್ತುಗಳ ಹೆಗಲಿಗೆ ಮಾಲೀಶ್ ಮಾಡಿ ಶಾಖ ನೀಡಿ ಸ್ನಾನ ಮಾಡಿಸುವರು. ಅವುಗಳ ಕೊಂಬುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸುವರು. ಕೊರಳಲ್ಲಿ ಕವಡೆ ಮತ್ತು ಗೆಜ್ಜೆನಾದದ ಸರಮಾಲೆ, ಕಾಲುಗಳಲ್ಲಿ ಗೆಜ್ಜೆ(ತೋಡೆ) ಮತ್ತು ಬೆನ್ನಲ್ಲಿ ಬಣ್ಣಬಣ್ಣದÀ ಝೂಲ್, ಬೆಲೆಬಾಳುವ ಶಾಲು, ಹಣೆಗೆ ರಂಗುರಂಗಿನ ಹಗ್ಗಗಳಿಂದ ತಯಾರಿಸಿದ ಬಟಾಟೆಗಳಿಂದ ಸಿಂಗರಿಸುವರು. ಎತ್ತುಗಳಿಗೆ ಗುಗ್ಗರಿ ಮತ್ತಿತರ ದ್ರವ ಪದಾರ್ಥ ನೀಡಿ ನೊಗದ ಹಗ್ಗವನ್ನು ಸಹ ಬದಲಾಯಿಸುವರು. ಮನೆಯಲ್ಲಿ ಮುತ್ತೈದೆಯರು ಎತ್ತುಗಳನ್ನು ಪೂಜಿಸಿ ಆರತಿ ಬೆಳಗಿ ವಿವಿಧ ಮೃಷ್ಠಾನ್ನ ಭೋಜನ ಮಾಡಿಸುವರು. ರೈತರು ಈ ಹಬ್ಬದಂದು ಉಪವಾಸವಿರುವರು. ಸಂಜೆ ಆಯಾ ಗ್ರಾಮದ 40-50 ಜೋಡಿ ಎತ್ತುಗಳನ್ನು ಸಣ್ಣ ಬಂಡಿಗೆ ಜೋಡಿಸಿ ಊರಲ್ಲಿ ವಾದ್ಯಮೇಳದೊಂದಿಗೆ ಆಕರ್ಷಕ ಮೆರವಣಿಗೆ ನಡೆಯುವುದು.

ಆಯಾ ಗ್ರಾಮದ ಮುಖಂಡರು ಊರಿನ ಅಗಸಿ ಬಾಗಿಲಿನಲ್ಲಿ ಕರಿ ಕಡಿದ ನಂತರವೇ ಎತ್ತುಗಳ ಓಟದ ಸ್ಪರ್ಧೆ ಪ್ರಾರಂಭವಾಗುತ್ತದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಣ್ಣ ಚಕ್ಕಡಿಯ ಮೇಲೆ ನಿಂತು ಎತ್ತುಗಳನ್ನು ಓಡಿಸುವವರ ಸಾಹಸ ಮೆಚ್ಚುವಂಥದ್ದು. ಈ ಓಟದ ಮಧ್ಯದಲ್ಲೇ ಏಳುತ-ಬೀಳುತ ಓಟ ಪೂರ್ಣಗೊಳಿಸುವ ದೃಶ್ಯ ಕಂಡಾಗ ಮೈ ಜುಂ..! ಎನ್ನುತ್ತದೆ. ಈ ಸಾಹಸಮಯ ದೃಶ್ಯಾವಳಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಕಣ್ತುಂಬ ನೋಡಿ ಆನಂದಿಸುವರು. ಯುವಕರು ಮತ್ತು ಮಕ್ಕಳು ಶಿಳ್ಳೆ ಹಾಕುವರು. ಸ್ಪರ್ಧೆಯ ಬಳಿಕ ಒಂದೂ ಹೊಡೆತವಿಲ್ಲದೆ ಜೋರಾಗಿ ಓಡುವ ಎತ್ತುಗಳಿಗೆ ಹಾಗೂ ಉತ್ತಮ ಜೋಡೆತ್ತುಗಳಿಗೆ ಬಹುಮಾನ ವಿತರಿಸಲಾಗುತ್ತದೆ. ನಮ್ಮ ಜಾನಪದ ಸಂಸ್ಕøತಿ, ಪರಂಪರೆ ಮತ್ತು ಹಳೆಯ ಪಳೆಯುಳಿಕೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರೈತ ಸಮುದಾಯ ಇಂದಿಗೂ ಹೋಳಾ ಹಬ್ಬವನ್ನು ಹರ್ಷೋಲ್ಲಾಸದಿಂದ ಆಚರಿಸುತ್ತಿರುವುದು ವಿಶೇಷವಾಗಿದೆ.

              ಜಿ. ಚಂದ್ರಕಾಂತ

ನಿವೃತ್ತ ಉಪ ನಿರ್ದೇಶಕರು,
ವಾರ್ತಾ ಇಲಾಖೆ, ಕಲಬುರಗಿ.