
ಕಲಬುರಗಿ.ಆ.23- ವಾಲ್ಮೀಕಿ ಹಗರಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಸ್‍ಐಟಿ ತನಿಖೆ ನಡೆಸಿದ್ದು,ಎಸ್‍ಐಟಿ ವರದಿಯಲ್ಲಿ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಸಿಬಿಐ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಇಡಿ ಹಾಗೂ ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತವೆ ಎಂದು ಆರೋಪಿಸಿದರು
ವಾಲ್ಮೀಕಿ ಹಗರಣದಲ್ಲಿ 87 ಕೋಟಿ ಹಣ ತೆಗೆದಿದ್ದ ಆರೋಪವಿದ್ದು,ಈ ಪೈಕಿ 79 ಕೋಟಿ ಈಗಾಗಲೇ ವಾಪಸ್ ಪಡೆಯಲಾಗಿದೆ.ಉಳಿದ ಹಣವನ್ನೂ ವಸೂಲಿ ಮಾಡಲಾಗುವುದು.ಸರ್ಕಾರದ ಹಣ ಎಲ್ಲಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಗೇಂದ್ರ ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.ರಾಜಕೀಯ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಲಾಗುತ್ತಿದೆ, ಕಾಂಗ್ರೆಸ್ ಪಕ್ಷ ಹಾಗೂ ಸಚಿವರು ನಾಗೇಂದ್ರ ಪರವಾಗಿ ನಿಲ್ಲಲಿದ್ದಾರೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ರಚನೆಗೆ 2 ಸಾವಿರ ಕೋಟಿ ಕಲೆಕ್ಷನ್ ಮಾಡಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ , ಯತ್ನಾಳ್ ಮೊದಲು ತಮ್ಮ ಆರೋಪಕ್ಕೆ ಸಾಕ್ಷ್ಯಾಧಾರ ನೀಡಲಿ.ಯಾವುದೇ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ಈ ಹಿಂದೆ ಮುಖ್ಯಮಂತ್ರಿ ಆಗಲು 2,500 ಕೋಟಿ ಕೇಳುತ್ತಾರೆ ಎಂದು ಯತ್ನಾಳ್ ಹೇಳಿದ್ದರು. ಹಾಗಾದರೆ ಆ ಆರೋಪವೂ ನಿಜವೇ ಎಂದು ಯತೀಂದ್ರ ಪ್ರಶ್ನಿಸಿದರು.
ವಂದೇ ಮಾತರಂ ಗೀತೆಯ ವಿಚಾರವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸುತ್ತಿದೆ.ಸ್ವಾತಂತ್ರ್ಯ ಹೋರಾಟಗಾರರ ತೀರ್ಮಾನಕ್ಕಿಂತ ಬಿಜೆಪಿಯವರ ತೀರ್ಮಾನವೇ ದೊಡ್ಡದಾ?ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಟೀಕಿಸಿದರು.






























