
ಕಲಬುರಗಿ :ಜೂ,25: ಸಹಕಾರ ಭಾರತಿ ಸಂಘಟನಾತ್ಮಕವಾಗಿ ಬಲಿಷ್ಠವಾದಾಗ ಮಾತ್ರ ಸಹಕಾರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹೇಳಿದರು.
ನಗರದ ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ ಸಹಕಾರ ಭಾರತಿ ಕಲಬುರಗಿ ಜಿಲ್ಲಾ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿ ಐದು ವರ್ಷಗಳು ಕಳೆದಿದ್ದು, ಹೊಸ ಸಹಕಾರಿ ನೀತಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರ ಹಲವು ಮಹತ್ವದ ಕಾರ್ಯಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಹಕಾರ ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ಭಾರತಿ ಸಂಘಟನೆ ಇನ್ನಷ್ಟು ಬಲಿಷ್ಠವಾಗುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಅಕ್ಟೋಬರ್‍ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಪೂರ್ಣ ಪ್ರಮಾಣದ ನೂತನ ಜಿಲ್ಲಾ ಸಮಿತಿ ರಚನೆಯಾಗಿರುವುದು ಸಂತಸದ ವಿಷಯವಾಗಿದೆ. ಫ್ಯಾಕ್ಸ್ ಮಿಲ್ಕ್, ಗೃಹ ನಿರ್ಮಾಣ ಹಾಗೂ ಗ್ರಾಹಕ ಪ್ರಕೋಷ್ಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕ ಜಿಲ್ಲಾ ಮಹಿಳಾ ಸಮಿತಿಯೂ ರಚನೆಯಾಗಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ನಗರದ ಜಗತ್ ಸರ್ಕಲ್‍ನ ಆಮಂತ್ರಣ ಹೋಟೆಲ್ ಹಿಂಭಾಗದಲ್ಲಿರುವ ಸಹಕಾರ ಭಾರತಿಯ ನೂತನ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದರು. ಭಾರತ ಮಾತೆಗೆ ಪೂಜೆ ಸಲ್ಲಿಸಿ, ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ನೂತನ ಕಚೇರಿ ಆರಂಭದಿಂದ ಸಹಕಾರ ಭಾರತಿಯ ಸಂಘಟನಾ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಭಾರತಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಕೆ.ಬಿ. ಶಟಗಾರ ವಹಿಸಿ ಮಾತನಾಡಿ, ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಂಘಟನೆ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಶ್ರೀ ಕೃಷ್ಣ ಜೋಶಿ ಮಾತನಾಡಿ, ಸಹಕಾರ ಕ್ಷೇತ್ರದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಯನ್ನು ನಿವಾರಿಸಲು ಪಾರದರ್ಶಕ, ಪ್ರಾಮಾಣಿಕ ಹಾಗೂ ಉತ್ತಮ ಆಡಳಿತ ಅತ್ಯಗತ್ಯವಾಗಿದೆ. ಸಹಕಾರ ಭಾರತಿ ಕಾರ್ಯಕರ್ತರು ಸಂಘಟನೆಯ ಜೊತೆಗೆ ತಾವು ಪ್ರತಿನಿಧಿಸುವ ಸಂಸ್ಥೆಗಳ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗದ ಸಾಗರದ ಬಿ.ವಿ. ರವೀಂದ್ರನಾಥ್, ಕಲಬುರಗಿ ವಿಭಾಗ ಕಾರ್ಯದರ್ಶಿ ರಾಜಕುಮಾರ ಮಾನ್ವಿ ಹಾಗೂ ರಾಜ್ಯ ಕಾನೂನು ಪ್ರಕೋಷ್ಟದ ಪ್ರಮುಖ ಸಂಜೀವ ಮಹಾಜನ್ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.
ಸಹಕಾರ ಭಾರತಿಯ ರಾಜ್ಯ ಗ್ರಾಹಕ ಪ್ರಕೋಷ್ಟದ ಸಹ ಸಂಚಾಲಕ ಎಸ್.ಎಸ್. ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಮಹಿಳಾ ಸಹಕಾರಿ ಪ್ರಕೋಷ್ಟದ ಪ್ರಮುಖ ಶೈಲಜಾ ತಪಲಿ ಸ್ವಾಗತಿಸಿದರು. ಜಿಲ್ಲಾ ಪದಾಧಿಕಾರಿ ಶಿವಶರಣಪ್ಪ ವಂದನಾರ್ಪಣೆ ಸಲ್ಲಿಸಿದರು. ಮಲ್ಲಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು.




















