
ಕಲಬುರಗಿ : ಮೇ.9: ಗೋಪಾಲಕೃಷ್ಣ ಗೋಖಲೆ ಅವರು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ತಮ್ಮ ‘ಸವೆರ್ಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ಮೂಲಕ ದೇಶ ಸೇವೆಗಾಗಿ ಯುವಕರನ್ನು ತರಬೇತಿಗೊಳಿಸಲು ಮತ್ತು ಸಾಮಾಜಿಕ ಸುಧಾರಣೆಗಳನ್ನು ಉತ್ತೇಜಿಸುವ ಮೂಲಕ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಗೋಪಾಲಕೃಷ್ಣ ಗೋಖಲೆಯವರ 160ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 1905 ರ ಬನಾರಸ್ ಅಧಿವೇಶನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಮಾಜದ ಉನ್ನತೀಕರಣಕ್ಕೆ ಶಿಕ್ಷಣ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಸ್ಥಳೀಯ ಭಾಷೆಗಳಲ್ಲಿ ಬೋಧನೆಯನ್ನು ಬೆಂಬಲಿಸಿದರು. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಹಿಂಸಾತ್ಮಕ ಮಾರ್ಗಗಳ ಬದಲಾಗಿ ಶಾಂತಿಯುತ ಮತ್ತು ಸಾಂವಿಧಾನಿಕ ಮಾರ್ಗಗಳನ್ನು ಪ್ರತಿಪಾದಿಸಿದರು. ಮಹಾತ್ಮ ಗಾಂಧಿಯವರ ರಾಜಕೀಯ ಮಾರ್ಗದರ್ಶಕರಾಗಿ ಗಾಂಧೀಜಿಯವರ ಆರಂಭಿಕ ರಾಜಕೀಯ ಚಿಂತನೆ ಮತ್ತು ಸಾಮಾಜಿಕ ಕಾರ್ಯಗಳ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ ಎಂದು ಗೋಖಲೆಯವರ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ ಹಾಗೂ ವಿದ್ಯಾರ್ಥಿಗಳು ಇದ್ದರು.





















