Home ಜಿಲ್ಲೆ ಬೆಂಗಳೂರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಖೆಡ್ಡಾಕ್ಕೆ ಕೆಡವುವ ಷಡ್ಯಂತರ ಯಶಸ್ವಿಯಾಗುವುದಿಲ್ಲ – ಮುಕ್ತ ಮುನಿಯಪ್ಪ

ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಖೆಡ್ಡಾಕ್ಕೆ ಕೆಡವುವ ಷಡ್ಯಂತರ ಯಶಸ್ವಿಯಾಗುವುದಿಲ್ಲ – ಮುಕ್ತ ಮುನಿಯಪ್ಪ

ಚಿಕ್ಕಬಳ್ಳಾಪುರ,ನ.೫- ಚಿಕ್ಕಬಳ್ಳಾಪುರ ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಸಿನಲ್ಲಿ ಸಿಲುಕಿಸಲು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ನಡೆಸುತ್ತಿರುವ ಹುನ್ನಾರಗಳು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಮೂಲಕ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮೊಬೈಲ್ ಬದಲಾವಣೆ ಎಂಬ ಹೊಸ ಬಾಂಬ್ ಸಿಡಿಸಿ ಕತ್ತಿ ಮಸೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಯಾವ ಖಾತೆಯ ಸಚಿವರು ಎಂಬುದನ್ನು ಸಹ ಅರಿಯದೆ, ಕಾಂಗ್ರೆಸ್ ನಾಯಕರ ರಕ್ಷಣೆಗಾಗಿ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಚ್ಯುತಿ ಬರುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆಸಲಾಗಿದೆ ಎನ್ನಲಾದ ಈ ಸ್ಟಿಂಗ್ ಆಪರೇಷನ್ ಪ್ರಕರಣದ ಹಿಂದೆ ಯಾರಿದ್ದಾರೆ ಮತ್ತು ಇದರ ಗ್ಯಾಂಗ್ ನಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಸಂಪೂರ್ಣ ತನಿಖೆಗೆ ಕುಮಾರಸ್ವಾಮಿ ಅವರು ಪಟ್ಟು ಹಿಡಿದಿರುವುದರಿಂದಲೇ ರಾಜ್ಯ ಸರ್ಕಾರ ಇಂದು ಕಕ್ಕಾಬಿಕ್ಕಿಯಾಗಿ ಒದ್ದಾಡುತ್ತಿದೆ ಎಂದು ಮುನಿಯಪ್ಪ ತಿಳಿಸಿದರು. ಸ್ಟಿಂಗ್ ಮಾಡಿದ ಅಸಲಿ ವ್ಯಕ್ತಿಗಳು ಯಾರೆಂಬುದು ಬಹಿರಂಗಗೊಂಡರೆ ಸರ್ಕಾರದ ಉನ್ನತ ನಾಯಕರು ಅಧಿಕಾರ ಕಳೆದುಕೊಳ್ಳುವ ಭೀತಿಯಿದೆ ಎಂದ ಅವರು, ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿರುವ ಕುಮಾರಸ್ವಾಮಿ ಅವರ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.


ದೆಹಲಿ ನಿವಾಸದಲ್ಲಿ ಮೊಬೈಲ್ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತನಿಖೆಯ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿರುವುದು ಕಾನೂನು ಬಾಹಿರವಾಗಿದ್ದು, ಇದು ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಆಪಾದಿಸಿದರು. ಸರ್ಕಾರದ ಇಂತಹ ದುರ್ನಡತೆ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಗಂಭೀರ ಎಚ್ಚರಿಕೆ ನೀಡಿದರು.


ಇದೇ ವೇಳೆ ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಮುಕ್ತ ಮುನಿಯಪ್ಪ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ತಾನೇ ಪ್ರಬಲ ಅಭ್ಯರ್ಥಿಯಾಗಲಿದ್ದು, ಈಗಾಗಲೇ ಟಿಕೆಟ್ಗಾಗಿ ಸಿದ್ಧತೆ ಹಾಗೂ ಪ್ರಯತ್ನಗಳನ್ನು ಆರಂಭಿಸಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ತಾನಾಗಲಿ ಅಥವಾ ನಮ್ಮ ಪಕ್ಷದ ಹೈಕಮಾಂಡ್ ಸೂಚಿಸುವ ಸೂಕ್ತ ಅಭ್ಯರ್ಥಿಯಾಗಲಿ ಕಣಕ್ಕಿಳಿಯುವುದು ಸಂಪೂರ್ಣ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಆರ್.ರೆಡ್ಡಿ, ಯಲುವಳ್ಳಿ ಸೊಣ್ಣೇಗೌಡ, ಶಾಂತಮೂರ್ತಿ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.