
ಮಾಲೂರು,ನ.೫- ಭಕ್ತ ಕುಂಬಾರ ನಾಟಕದ ಮೂಲಕ ಜನಪ್ರಿಯತೆ ಗಳಿಸಿರುವ ಹಾಗೂ ಖ್ಯಾತ ತಬಲಾ ಕಲಾವಿದರಾದ ತಬಲಾ ನಾರಾಯಣಪ್ಪ ಅವರಿಗೆ ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಮಾಲೂರು ತಾಲ್ಲೂಕಿನ ಕಲಾ ಕ್ಷೇತ್ರಕ್ಕೆ ಸಂದ ಹೆಮ್ಮೆಯ ಗೌರವವಾಗಿದೆ ಎಂದು ಡ್ರಾಮಾ ಮಾಸ್ಟರ್ ಪಡವನಹಳ್ಳಿ ನಾಗರಾಜ್ ಬಣ್ಣಿಸಿದ್ದಾರೆ.
ನಗರದ ಮಾಲೂರು-ಬೆಂಗಳೂರು ರಸ್ತೆಯಲ್ಲಿರುವ ತಬಲಾ ನಾರಾಯಣಪ್ಪ ಅವರ ನಿವಾಸದಲ್ಲಿ ಡ್ರಾಮಾ ಕಲಾವಿದರ ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ, ಸಂಗೀತ ಗುರು ಹಂಸಧ್ವನಿ ಶ್ರೀನಿವಾಸ್ ಅವರ ಶಿಷ್ಯರಾದ ಡ್ರಾಮಾ ಮಾಸ್ಟರ್ ಪಡವನಹಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ತಬಲಾ ನಾರಾಯಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಡವನಹಳ್ಳಿ ನಾಗರಾಜ್, ತಬಲಾ ನಾರಾಯಣಪ್ಪ ಅವರು ಹಿರಿಯ ಕಲಾವಿದರಾಗಿ ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಯುವ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಕೇವಲ ಅವರ ವೈಯಕ್ತಿಕ ಸಾಧನೆಗೆ ಮಾತ್ರವಲ್ಲದೆ ಇಡೀ ಕಲಾವಿದರ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ಲಭಿಸಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಸಿ.ಎಂ.ನಂಜುಂಡಪ್ಪ (ಪಾಸ್ವಾನ್), ಹರಿಕಥಾ ದಾಸ ಕಂಬಿಪುರ ವಿ. ನಟರಾಜ್, ಡೋಲಕ್ಸ್ ಜಯಸೂರ್ಯ, ಆನಂದ್ ಶೆಟ್ಟಿ, ತ್ಯಾಗರಾಜ್, ತಬಲಾ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.























