Home ಸುದ್ದಿ ರಾಷ್ಟ್ರೀಯ ಇರಾನ್ ಮೇಲೆ ದಾಳಿ ಸದ್ಯಕ್ಕಿಲ್ಲ- ಟ್ರಂಪ್

ಇರಾನ್ ಮೇಲೆ ದಾಳಿ ಸದ್ಯಕ್ಕಿಲ್ಲ- ಟ್ರಂಪ್

ವಾಷಿಂಗ್ಟನ್, ನ.4-ಇರಾನ್ ಮೇಲೆ ಸದ್ಯಕ್ಕೆ ಯಾವುದೇ ಹೊಸ ದಾಳಿ ನಡೆಸುವ ಉದ್ದೇಶ ಸದ್ಯಕ್ಕಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಆದರೆ ಇರಾನ್‍ನಿಂದ ಅಮೆರಿಕದ ಭದ್ರತೆಗೆ ಅಪಾಯ ಎದುರಾದರೆ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ಇರಾನ್ ವಿರುದ್ಧ ಮತ್ತೆ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಫೈನಾನ್ಷಿಯಲ್ ಟೈಮ್ಸ್‍ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮೇಲೆ ದಾಳಿ ನಡೆಸಲು ಸದ್ಯಕ್ಕೆ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಅಗತ್ಯ ಬಿದ್ದರೆ ಸೇನಾ ಕ್ರಮ ಕೈಗೊಳ್ಳಲು ಅಮೆರಿಕ ಸಿದ್ಧವಾಗಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.


ಇರಾನ್ ವಿರುದ್ಧ ಮತ್ತೆ ಕಾರ್ಯಾಚರಣೆ ನಡೆಸುವ ಪರಿಸ್ಥಿತಿ ಎದುರಾದರೆ ಅಮೆರಿಕದ ಸೇನೆ ಸಂಪೂರ್ಣ ಸನ್ನದ್ಧವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ದಾಳಿ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಅಮೆರಿಕ ತನ್ನ ಉದ್ದೇಶಿತ ಗುರಿಗಳನ್ನು ಸಾಧಿಸುತ್ತಿದೆ. ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳು ಹಾಗೂ ಬಂದರುಗಳ ಮೇಲಿನ ನೌಕಾ ದಿಗ್ಬಂಧನದಿಂದ ಆ ದೇಶದ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಇರಾನ್ ಜೊತೆ ಪರೋಕ್ಷ ಮಾತುಕತೆಗಳು ಮುಂದುವರಿದಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಇರಾನ್ ಹೊಂದಿರುವ ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹದ ಭವಿಷ್ಯದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.


ಹೋರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ಮತ್ತು ಇರಾನ್ ಮೇಲಿನ ಅಮೆರಿಕದ ಒತ್ತಡದ ವಿಚಾರಗಳೂ ಸಂದರ್ಶನದಲ್ಲಿ ಪ್ರಸ್ತಾಪವಾಗಿವೆ.
ಇರಾನ್ ಮೇಲೆ ತಕ್ಷಣ ಮತ್ತೊಂದು ದಾಳಿ ನಡೆಸುವ ಯೋಜನೆ ಇಲ್ಲ ಎಂಬ ಟ್ರಂಪ್ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಹೊಸ ಆಯಾಮ ನೀಡಿದೆ. ಆದರೆ ಸೇನಾ ಕ್ರಮದ ಸಾಧ್ಯತೆಯನ್ನು ಅಮೆರಿಕ ಸಂಪೂರ್ಣವಾಗಿ ತಳ್ಳಿಹಾಕಿಲ್ಲ.
ಅಮೆರಿಕ ಮತ್ತು ಇರಾನ್ ನಡುವಿನ ನೇರ ಮಾತುಕತೆಗಳಿಗೆ ಬದಲಾಗಿ ಕತಾರ್ ಮಧ್ಯಸ್ಥಿಕೆಯಲ್ಲಿ ಪರೋಕ್ಷ ಮಾತುಕತೆಗಳು ನಡೆಯುತ್ತಿವೆ.
ಇರಾನ್ ಅಧಿಕಾರಿಗಳು ದೋಹಾದಲ್ಲಿ ಕತಾರ್ ಮಧ್ಯಸ್ಥಿಕೆಯಲ್ಲಿ ಸತತ ಮೂರು ದಿನಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.