Home ಜಿಲ್ಲೆ ಬೆಂಗಳೂರು ಮಾಲೂರಿನಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆ: ಎಸ್ಸಿ ಮೋರ್ಚಾ ಹಾಗೂ ಒಬಿಸಿ ತಾಲೂಕು ಅಧ್ಯಕ್ಷರ ನೇಮಕ

ಮಾಲೂರಿನಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆ: ಎಸ್ಸಿ ಮೋರ್ಚಾ ಹಾಗೂ ಒಬಿಸಿ ತಾಲೂಕು ಅಧ್ಯಕ್ಷರ ನೇಮಕ

ಮಾಲೂರು,ನ.೪- ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷರಾಗಿ ಓಬಳಾಪುರ ಶಂಕರ್ ಹಾಗೂ ಒಬಿಸಿ ತಾಲೂಕು ಅಧ್ಯಕ್ಷರಾಗಿ ಕೆ.ಎನ್.ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ. ನಗರದ ವೈಟ್ ಗಾರ್ಡನ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರ ಸೂಚನೆ ಹಾಗೂ ಮಾರ್ಗದರ್ಶನದಂತೆ ಈ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಅವರು ಅಧಿಕೃತ ಆದೇಶ ಪತ್ರವನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದರ ಜೊತೆಗೆ ಮಾಲೂರು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಒಗ್ಗೂಡಿಸಿಕೊಂಡು ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಹಾಗೂ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರನ್ನು ಮುಂದಿನ ದಿನಗಳಲ್ಲಿ ಶಾಸಕರನ್ನಾಗಿ ಮಾಡುವ ಗುರಿಯೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.


ನೂತನವಾಗಿ ಆಯ್ಕೆಯಾದ ಎಸ್ಸಿ ಮೋರ್ಚಾ ಅಧ್ಯಕ್ಷ ಓಬಳಾಪುರ ಶಂಕರ್ ಹಾಗೂ ಒಬಿಸಿ ಅಧ್ಯಕ್ಷ ಕೆ.ಎನ್. ಜಗದೀಶ್ ಅವರು ತಮ್ಮ ಆಯ್ಕೆಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ, ನಗರಾಧ್ಯಕ್ಷ ನಂದೀಶ್, ನಗರಸಭೆಯ ಮಾಜಿ ಸದಸ್ಯ ಎಂ.ಎಸ್. ಪ್ರದೀಪ್ ರೆಡ್ಡಿ, ಆಗ್ರಿ ನಾರಾಯಣಪ್ಪ, ಚಿನ್ನಸ್ವಾಮಿ ಗೌಡ, ಬೆಳ್ಳಾವಿ ಸೋಮಣ್ಣ, ಕೂರಂಡಹಳ್ಳಿ ರಾಜು, ಮಡಿವಾಳ ಚಂದ್ರಶೇಖರ್, ಅಧಿಕಾರಹಟ್ಟಿ ಬಾಬು, ಅಂಚೆ ಮುಸ್ಕೂರಯ್ಯ ಬಾಬು, ತಾಲೂಕು ಪ್ರಧಾನ ಕಾರ್ಯದರ್ಶಿ ಸಾಯಿ ವೆಂಕಟೇಶ್, ಮಿಟ್ಟಗಾನಹಳ್ಳಿ ಮೂರ್ತಿ, ಮಂಗಾಪುರ ಶಾಂತರಾಜ್, ವಡಗನಹಳ್ಳಿ ಮಂಜು ಸೇರಿದಂತೆ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.