Home ಸಿನೆಮಾ ಭಿನ್ನ ಮನಸುಗಳ ಪ್ರೇಮಕಥೆ ‘ಓ ಮನಸೇ’ ನವೆಂಬರ್ 10ರಿಂದ

ಭಿನ್ನ ಮನಸುಗಳ ಪ್ರೇಮಕಥೆ ‘ಓ ಮನಸೇ’ ನವೆಂಬರ್ 10ರಿಂದ

ಸ್ಟಾರ್ ಸುವರ್ಣದಲ್ಲಿ ಪ್ರತಿದಿನ ರಾತ್ರಿ 8.30ಕ್ಕೆ ಹೊಸ ಧಾರಾವಾಹಿ

ಪ್ರೀತಿ, ನಂಬಿಕೆ ಹಾಗೂ ಭಿನ್ನ ವ್ಯಕ್ತಿತ್ವಗಳ ನಡುವಿನ ಸಂಘರ್ಷದ ಕಥೆಯೊಂದಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಓ ಮನಸೇ’ ಹೊಸ ಧಾರಾವಾಹಿ ಆರಂಭವಾಗಲಿದೆ. ನವೆಂಬರ್ 10ರಿಂದ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗಲಿರುವ ಈ ಧಾರಾವಾಹಿ, ಎರಡು ವಿರುದ್ಧ ಮನಸುಗಳ ಪ್ರೇಮಯಾನವನ್ನು ತೆರೆದಿಡಲಿದೆ.

ಮೈಸೂರಿನ ಮಧ್ಯಮ ವರ್ಗದ ಕುಟುಂಬದ ರಾಗಾ ಶಿಕ್ಷಣವನ್ನೇ ಬದುಕಿನ ಮುಖ್ಯ ಗುರಿಯಾಗಿಸಿಕೊಂಡ ಯುವತಿ. ಶಿಕ್ಷಣ ಸ್ವಾತಂತ್ರ್ಯದ ಹಾದಿ ಎಂದು ನಂಬಿರುವ ಆಕೆಗೆ ತಂದೆಯೇ ಅಡ್ಡಿಯಾಗುತ್ತಾನೆ. ಮತ್ತೊಂದೆಡೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಿಷಿಗೆ ಪ್ರೀತಿಯ ಮೇಲೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯೊಂದಿಗಿನ ಮನಸ್ತಾಪವೂ ಆತನ ಬದುಕಿನ ಭಾಗವಾಗಿದೆ.

ರಾಗಾ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಾಳೆಯೇ? ಕಲ್ಯಾಣಿ ಮತ್ತು ಜಯರಾಮ್ ನಡುವಿನ ಹಳೆಯ ಭಿನ್ನಾಭಿಪ್ರಾಯ ದೂರವಾಗುತ್ತದೆಯೇ? ಪ್ರೀತಿಯಲ್ಲಿ ನಂಬಿಕೆಯಿಲ್ಲದ ರಿಷಿ ಮತ್ತು ರಾಗಾ ಒಂದಾಗುತ್ತಾರೆಯೇ ಎಂಬುದು ಧಾರಾವಾಹಿಯ ಕುತೂಹಲ.

ರಿಷಿ ಪಾತ್ರದಲ್ಲಿ ದರ್ಶಕ್ ಗೌಡ ಹಾಗೂ ರಾಗಾ ಪಾತ್ರದಲ್ಲಿ ಮಧುಮಿತಾ ಗೌಡ ನಟಿಸುತ್ತಿದ್ದಾರೆ. ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ ಹಾಗೂ ನಿಸರ್ಗ ಅಣ್ಣಪ್ಪ ತಾರಾಗಣದಲ್ಲಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ಗಣಪತಿ ಭಟ್ ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಓ ಮನಸೇ’ ಧಾರಾವಾಹಿಯನ್ನು ಸ್ಟಾರ್ ಸುವರ್ಣ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಇದೇ ವೇಳೆ, ‘ವಸುದೇವ ಕುಟುಂಬ’ ಧಾರಾವಾಹಿಯ ಪ್ರಸಾರದ ಸಮಯವೂ ಬದಲಾಗಿದ್ದು, ನವೆಂಬರ್ 10ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.