Home ಜಿಲ್ಲೆ ಕಲಬುರಗಿ ಪತ್ರಿಕೋದ್ಯಮ ಉದ್ಯಮವಾಗದೆ ಸಮಾಜಮುಖಿಯಾಗಲಿ: ಡಾ.ಚನ್ನಬಸವಾನಂದ ಸ್ವಾಮಿಜಿ

ಪತ್ರಿಕೋದ್ಯಮ ಉದ್ಯಮವಾಗದೆ ಸಮಾಜಮುಖಿಯಾಗಲಿ: ಡಾ.ಚನ್ನಬಸವಾನಂದ ಸ್ವಾಮಿಜಿ

ಸಂಜೆವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ

ಬೀದರ್: ‘ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮವು ಕೇವಲ ಉದ್ಯಮವಾಗಿ ಮಾರ್ಪಡದೆ, ಸಮಾಜದ ಹಿತ ಕಾಯುವ ಪತ್ರಿಕಾ ಧರ್ಮವನ್ನು ಪಾಲಿಸಬೇಕು. ನಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡುವ ಬದಲು ಜನರಲ್ಲಿ ಸಕಾರಾತ್ಮಕ ಚಿಂತನೆ, ನೈತಿಕ ಮೌಲ್ಯ ಹಾಗೂ ಆಧ್ಯಾತ್ಮಿಕ ಪ್ರಜ್ಞೆ ಬೆಳೆಸುವ ಕಾರ್ಯಕ್ಕೆ ಮಾಧ್ಯಮಗಳು ಮುಂದಾಗಬೇಕು’ ಎಂದು ಬೆಂಗಳುರು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧಿಪತಿ ಪೂಜ್ಯ ಡಾ.ಚನ್ನಬಸವಾನಂದ ಸ್ವಾಮಿಜಿ ಅಭಿಪ್ರಾಯ ಪಟ್ಟರು.

ನಗರದ ಜನವಾಡ ರಸ್ತೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ‘ಸಂಜೆವಾಣಿ’ ದಿನಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಪರಾಧ, ಕಳ್ಳತನ, ದರೋಡೆ ಮತ್ತು ಇತರ ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತಿದೆ. ಸಮಾಜದಲ್ಲಿ ನಡೆಯುವ ಉತ್ತಮ ಕಾರ್ಯಗಳು, ಮಾನವೀಯ ಸೇವೆ ಮತ್ತು ಆದರ್ಶ ವ್ಯಕ್ತಿತ್ವಗಳಿಗೂ ಸೂಕ್ತ ಪ್ರಚಾರ ದೊರೆಯಬೇಕು. ಪತ್ರಿಕೋದ್ಯಮ ತನ್ನ ಮೂಲ ಆಶಯದಿಂದ ವಿಮುಖವಾಗಬಾರದು’ ಎಂದು ಸಲಹೆ ನೀಡಿದರು.

ಸಂಜೆವಾಣಿಗೆ ಜನಮನ್ನಣೆ: ‘ಸಂಜೆವಾಣಿ ಪತ್ರಿಕೆ ಹಲವು ದಶಕಗಳಿಂದ ಜನಸಾಮಾನ್ಯರ ವಿಶ್ವಾಸ ಗಳಿಸಿಕೊಂಡಿದೆ. ವಿದ್ಯಾರ್ಥಿ ಚಳವಳಿ, ಸಾರ್ವಜನಿಕ ಹೋರಾಟ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಅಂದಿನ ದಿನವೇ ಜನರಿಗೆ ತಲುಪಿಸುವ ಮೂಲಕ ಪತ್ರಿಕೆ ವಿಶಿಷ್ಟ ಸ್ಥಾನ ಪಡೆದಿದೆ. ಸಂಜೆ ಪತ್ರಿಕೆ ಎಂದರೆ ಸಂಜೆವಾಣಿ ಎನ್ನುವಷ್ಟರ ಮಟ್ಟಿಗೆ ಓದುಗರ ಮನಸ್ಸಿನಲ್ಲಿ ನೆಲೆಸಿದೆ’ ಎಂದು ಪೂಜ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪತ್ರಿಕೆಯ ಉಪ ಸಂಪಾದಕ ಶಿವಕುಮಾರ್ ಸ್ವಾಮಿ ಅವರು ಕಳೆದ 16 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಪತ್ರಿಕಾ ವೃತ್ತಿಯೊಂದಿಗೆ ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿರುವುದು ಅಭಿನಂದನಾರ್ಹ’ ಎಂದು ಹೇಳಿದರು.

ಆಧ್ಯಾತ್ಮಿಕ ಚಿಂತನೆಯಿಂದ ಮನಃಶಾಂತಿ: ‘ ದಿವ್ಯ ಸಾನಿಧ್ಯ ವಹಿಸಿದ ಬ್ರಹ್ಮಾಕುಮಾರಿ ಪಾವನಧಾಮ ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬೆಹೆನಜಿ ಅವರು ಮಾತನಾಡಿ ಧರ್ಮದ ಹೆಸರಿನಲ್ಲಿ ಪರಸ್ಪರ ಶ್ರೇಷ್ಠತೆಯ ವಾದ ಮಾಡುವುದಕ್ಕಿಂತ ಆತ್ಮದ ನಿಜಸ್ವರೂಪ ಅರಿತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಆಧ್ಯಾತ್ಮಿಕ ಚಿಂತನೆಯಿಂದ ವ್ಯಕ್ತಿಯಲ್ಲಿ ಶಾಂತಿ, ಸಹನೆ, ಪ್ರೀತಿ ಮತ್ತು ಸೇವಾ ಮನೋಭಾವ ಬೆಳೆಯುತ್ತದೆ’ ಎಂದು ತಿಳಿಸಿದರು.

.ಸಂಜೆವಾಣಿ ದೀಪಾವಳಿ ವಿಶೇಷಾಂಕದಲ್ಲಿ ಶುಭ ಸಂದೇಶಗಳು, ಸುವಿಚಾರಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಸ್ಥಾನ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಪ್ರಕಟಣೆಗಳು ಓದುಗರಲ್ಲಿ ಸಕಾರಾತ್ಮಕ ದೃಷ್ಟಿಕೋನ ಬೆಳೆಸಲು ಸಹಕಾರಿಯಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಶೇಡಂಕರ್ ಅವರ ವೈದ್ಯಕೀಯ ಹಾಗೂ ಸಮಾಜಸೇವೆಯನ್ನು ಶ್ಲಾಘಿಸಲಾಯಿತು. ವಿಶೇಷಾಂಕದ ಮುದ್ರಣಕ್ಕೆ ನೀಡಿದ ಸಹಕಾರವನ್ನು ಸ್ಮರಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ವೈದ್ಯ ಡಾ. ರಾಜಶೇಖರ ಶೇಡಂಕರ್, ‘ಬ್ರಹ್ಮಾಕುಮಾರಿ ಸಂಸ್ಥೆಯೊಂದಿಗೆ ಕಳೆದ 25 ವರ್ಷಗಳಿಂದ ಒಡನಾಟ ಹೊಂದಿದ್ದು, ಧ್ಯಾನ, ಆಧ್ಯಾತ್ಮಿಕ ಚಿಂತನೆ ಹಾಗೂ ಮಾನಸಿಕ ನೆಮ್ಮದಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಉತ್ತಮ ಜೀವನಶೈಲಿ ಮತ್ತು ಸಕಾರಾತ್ಮಕ ಮನೋಭಾವವೂ ಅಗತ್ಯ’ ಎಂದು ಪ್ರತಿಪಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೆಯ ಉಪ ಸಂಪಾದಕ ಶಿವಕುಮಾರ ಸ್ವಾಮಿ, 1982 ರಲ್ಲಿ ಪ್ರಾರಂಭವಾದ ಸಂಜೆವಾಣಿ ದಿನಪತ್ರಿಕೆ ನಾಡಿನಾದ್ಯಂತ ಇಂದು 12 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಬೃಹತ್ತಾದ ಮಾಧ್ಯಮ ಸಂಸ್ಥೆಯಾಗಿ ಮುನ್ನುಗ್ಗುತ್ತಿದೆ. ಇದು ಇಂದಿನ ಸುದ್ದಿ ಎಂದೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡು ಕಳೆದ 16 ವರ್ಷಗಳಿಂದ ಪರಮಾತ್ಮನ ಮನೆಯಲ್ಲಿಯೇ ಸಂಜೆವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ ಜರುಗಲಿಕ್ಕೆ ಸರ್ವ ರೀತಿಯ ಸಹಕಾರ ನೀಡುತ್ತಿರುವಂತ ಬ್ರಹ್ಮಾಕುಮಾರಿ ಸಹೋದರಿಯರಿಗೆ ಸಂಜೆವಾಣಿ ಸದಾ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಇದೇ ವೇಳೆ ಸಂಜೆವಾಣಿ ದಿನಪತ್ರಿಕೆ ವಿಶೇಷಾಂಕ ಸಂದರ್ಭದಲ್ಲಿ ಸೇವೆ ಸಲ್ಲಿಸಿರುವ ಸತೀಶ ಬೆಳಕೋಟೆ, ಕಾರ್ತಿಕ ಮಠಪತಿ ಹಾಗೂ ಗೋಪಿಚಂದ್ ತಾಂದಳೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತ ಮಹಾರುದ್ರ ಡಾಕೋಳಿಗಿ, ಚೇತನ, ಅಭಿಷೇಕ, ರಾಮಚಂದ್ರ ಕೊಂಡಾ ಸೇರಿದಂತೆ ಕೇಂದ್ರದ ಸಹೋದರ, ಸಹೋದರಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಿ.ಕೆ ಗುರುದೇವಿ ಅಕ್ಕನವರು ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಕಾರ್ತಿಕ ಮಠಪತಿ ವಂದಿಸಿದರು. ಎಲ್ಲರಿಗೂ ದೀಪಾವಳಿ ಶುಭಾಶಯಗಳನ್ನು ಕೋರಿ, ‘ಓಂ ಶಾಂತಿ’ ಸಂದೇಶದೊಂದಿಗೆ ಸಮಾರಂಭ ಮುಕ್ತಾಯಗೊಳಿಸಲಾಯಿತು.