
ಕಲಬುರಗಿ:ಮೇ.2: “ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?” ಎಂದು ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ಡಾ.ಶರಣಬಸಪ್ಪ ಕಾಮರಡ್ಡಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಈ ಕುರಿತು ಪತ್ರಿಕಾಪ್ರಕಟಣೆ ಹೊರಡಿಸಿದ ಅವರು ಅಡುಗೆ ಅನಿಲ ಸಿಲಿಂಡರ್ ಬೆಲೆ ಹಾಗೂ ಇತರೆ ಅಗತ್ಯ ಸೇವೆಗಳ ಬೆಲೆ ಏರಿಕೆ ಕುರಿತ “ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಜನಸಾಮಾನ್ಯರ ಮೇಲೆಯೇ ಹೋಗುತ್ತದೆ. ಇದರಿಂದಾಗಿ ಅನೇಕ ಹೊಟೇಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು. ಸರ್ಕಾರ ಜನರ ಮೇಲಿನ ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ ದಾರಿಯನ್ನು ಕೇಂದ್ರ ಸರ್ಕಾರ ಮಾಡಬೇಕಿದೆ” ಎಂದರು.
“ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು”ಎಂದರು.
ಬಡವರಿಗೆ ದ್ರೋಹ ಬಗೆಯಲಾಗಿದೆ: “ಕೇಂದ್ರ ಸರ್ಕಾರ ಈ ಬೆಲೆ ಏರಿಕೆ ಮೂಲಕ ಬಡವರಿಗೆ ದ್ರೋಹ ಬಗೆಯುತ್ತಿದೆ. ಪಂಚರಾಜ್ಯ ಚುನಾವಣೆ ಮುಕ್ತಾಯವಾಗಲಿ ಎಂದು ಸರ್ಕಾರ ಕಾಯುತ್ತಿತ್ತು. ಸರ್ಕಾರದ ಈ ತೀರ್ಮಾನದಿಂದ ಹೊಟೇಲ್ ಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಜನರಿಗೆ ಕೇಂದ್ರ ಸರ್ಕಾರ ಸೌದೆ ಭಾಗ್ಯ ನೀಡಿದೆ. ಸೌದೆ ಒಲೆ ಕಡಿಮೆ ಮಾಡುತ್ತೇವೆ ಎಂದು ಉಜ್ವಲ ಯೋಜನೆ ಮೂಲಕ ಪ್ರಚಾರ ಪಡೆದರು. ಈಗ ಸುಮಾರು ಸಾವಿರ ರೂ ದರ ಏರಿಕೆ ಮಾಡಿದ್ದು, ಜನ ಹೇಗೆ ಬದುಕಬೇಕು? ಈ ಕಾರಣಕ್ಕೆ ನಾವು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ನಾವು ರಾಜ್ಯದಲ್ಲಿ ಒಂದೂವರೆ ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ಲಾಭ ಸಿಗುತ್ತಿವೆ. ಎಂದು ಪ್ರಕಟಣೆ ಮೂಲಕ ತಿಳಿಸಿದ್ದರು






















