
ರಬಕವಿ-ಬನಹಟ್ಟಿ,ಮೇ.೧೭:ಮಾನವನ ಬದುಕಿಗೆ ಆಹಾರ ಅವಶ್ಯಕವಾಗಿದ್ದು, ಹಸಿದವರಿಗೆ ಅನ್ನ ನೀಡುವುದು ಅತ್ಯುತ್ತಮ ದಾನವೆಂದು ಪರಿಗಣಿತವಾಗಿದೆ. ದಾಸೋಹವೆಂದರೆ ಸ್ವಾರ್ಥವಿಲ್ಲದೇ ಸೇವೆ ಮಾಡುವುದೆಂದರ್ಥ. ಬಸವಣ್ಣನವರು ಕಾಯಕವೇ ಕೈಲಾಸ, ದಾಸೋಹವೇ ಧರ್ಮ ಎಂದು ಸಾರಿ, ದುಡಿದು ಸಂಪಾದಿತ ಸಂಪತ್ತನ್ನು ಸಮಾಜದ ಹಿತಕ್ಕೆ ಬಳಸಬೇಕೆಂದು ಹೇಳಿದರೆಂದು ಗೌರವ ಡಾಕ್ಟರೇಟ್ ಪಡೆದ ಶ್ರೀಕಾಂತ ಕೆಂಧೂಳಿ ಹೇಳಿದರು.
ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಲಿಂ.ಶ್ರೀಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಆಯೋಜಿಸಿದ್ದ ೩೯ನೇ ಅನ್ನದಾಸೋಹ ಸೇವೆಯನ್ನು ಚಾಲನೆ ನೀಡಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ಬಸವಾದಿ ಶರಣರ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ದಾಸೋಹ, ಕಾಯಕ ಮತ್ತು ಅನುಭವ ಈ ಮೂರು ವಿಚಾರಗಳನ್ನು ಅಳವಡಿಸಿಕೊಂಡು ಮನುಕುಲಕ್ಕೆ ಅಳಿಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೋಮಶೇಖರ ಕೊಟ್ರಶೆಟ್ಟಿಯವರ ಕಾರ್ಯ ಅಭಿನಂದನಾರ್ಹವೆAದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕ ಸುಭಾಷ್ ಉಮದಿ ಅನ್ನದಾಸೋಹದಿಂದ ಬಡವರು, ಅನಾಥರು ಹಾಗೂ ಯಾತ್ರಿಕರಿಗೆ ಸಹಾಯವಾಗುತ್ತಿದ್ದು, ಸುಕ್ಷೇತ್ರದಲ್ಲಿನ ಅನ್ನದಾಸೋಹಕ್ಕೆ ಪೂಜ್ಯನೀಯ ಪ್ರಸಾದದ ರೂಪವಿದ್ದು, ಭಕ್ತಿ ಮತ್ತು ಪೂಜ್ಯತೆಯ ಗುಣಗಳಿಂದ ಅನ್ನ ಪರಬ್ರಹ್ಮಸ್ವರೂಪವಾಗುತ್ತದೆ. ದಾಸೋಹದಿಂದ ಸಮಾಜದಲ್ಲಿ ದಯೆ, ಕರುಣೆ ಮತ್ತು ಸಹಾನುಭೂತಿ ಗುಣಗಳು ವೃದ್ಧಿಗೊಂಡು ಹಸಿವು ಮುಕ್ತಗೊಳಿಸುವ ಪ್ರಮುಖ ಮಾರ್ಗವೇ ದಾಸೋಹವಾಗಿದೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಹೇರಲಗಿ, ರಾಜು ಉಮದಿ, ವಿಶ್ವನಾಥ ಮಿರ್ಜಿ, ಮಹಾದೇವಯ್ಯಾ ನಂದೇಗೋಳ, ವಿಜಯಕುಮಾರ ಹಲಕುರ್ಕಿ, ಸತೀಶ ಗದಗ, ಸಂಗಮೆಶ ಗುಣಕಿ ಸೇರಿದಂತೆ ಭಾರತ ಗ್ಯಾಸ್ ಸಿಬ್ಬಂದಿ, ಶ್ರೀದೇವಿಯ ಸದ್ಭಕ್ತರು ಪ್ರಸಾದ ಸೇವೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪಿಯೂಸಿಯಲ್ಲಿ ಶೇ.೯೬.೧೭ ಅಂಕಗಳನ್ನು ಗಳಿಸಿ ಸಾಧನೆ ಮೆರೆದ ಗುರುರಾಜ ಸತೀಶ ಗದಗ ಸನ್ಮಾನಿತರಾದರು.

























