
ನವದೆಹಲಿ, ಜೂ.೧೯- ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ‘ನೀಟ್-ಯುಜಿ’ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿಧಿಸಿದ್ದ ಟೆಲಿಗ್ರಾಂ ಆಪ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ಇಂದು ಎತ್ತಿಹಿಡಿದಿದೆ.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಸರ್ಕಾರ ಕೈಗೊಂಡಿರುವ ಈ ಕ್ರಮವು ಸೂಕ್ತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೦ ರ ಸೆಕ್ಷನ್ ೬೯ಎ ಅಡಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ವಜಾಗೊಳಿಸಿದೆ. “ಸರ್ಕಾರದ ಕ್ರಮಗಳು ಅತಿ ಕಡಿಮೆ ನಿರ್ಬಂಧದಾಯಕವಾಗಿದ್ದು, ಇದನ್ನು ಅಸಮಾನ ಅಥವಾ ಅತಿರೇಕದ ಕ್ರಮ ಎಂದು ಹೇಳಲು ಸಾಧ್ಯವಿಲ್ಲ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮೇ ೩ ರಂದು ನಡೆದಿದ್ದ ಮೂಲ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ಮಧ್ಯೆ, ಜೂನ್ ೨೨ ರಂದು ಮರುಪರೀಕ್ಷೆ ನಿಗದಿಯಾಗಿದ್ದು, ಸಂಘಟಿತ ನಕಲು ದಂಧೆಕೋರರು ಅಭ್ಯರ್ಥಿಗಳನ್ನು ವಂಚಿಸಲು ಮತ್ತು ಪ್ರಶ್ನೆಪತ್ರಿಕೆ ಹಂಚಿಕೊಳ್ಳಲು ಟೆಲಿಗ್ರಾಂ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂಬ ಆತಂಕವಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜೂನ್ ೨೨ ರವರೆಗೆ ಭಾರತದಲ್ಲಿ ಟೆಲಿಗ್ರಾಂ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಪೋಸ್ಟ್ ಮಾಡಲಾದ ಸಂದೇಶಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನು ಜೂನ್ ೩೦ ರವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಟೆಲಿಗ್ರಾಂ ವಾದವೇನು?
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ್ದ ಟೆಲಿಗ್ರಾಂ ಪರ ಹಿರಿಯ ವಕೀಲ ಧ್ರುವ್ ಮೆಹ್ತಾ, “ಇತರ ಸಾಮಾಜಿಕ ಮಾಧ್ಯಮಗಳನ್ನು ಮುಕ್ತವಾಗಿಟ್ಟು, ಕೇವಲ ಟೆಲಿಗ್ರಾಂ ಅನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಸಂವಿಧಾನದ ವಿಧಿ ೧೪ ರ ಉಲ್ಲಂಘನೆಯಾಗಿದೆ. ಸರ್ಕಾರ ನೀಡಿದ ಲಿಂಕ್‌ಗಳನ್ನು ಒಂದು ಗಂಟೆಯೊಳಗೆ ತೆಗೆದುಹಾಕಿದ್ದೇವೆ ಮತ್ತು ನೀಟ್ ಅಕ್ರಮಕ್ಕೆ ಸಂಬಂಧಿಸಿದ ೯೦೦ ಕ್ಕೂ ಹೆಚ್ಚು ಲಿಂಕ್‌ಗಳನ್ನು ಈಗಾಗಲೇ ಬ್ಲಾಕ್ ಮಾಡಲಾಗಿದೆ. ಹೀಗಿದ್ದೂ ಪರೀಕ್ಷಾ ಅಕ್ರಮವನ್ನು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ವಿಷಯ ಎಂದು ಬಿಂಬಿಸಿ ಆಪ್ ನಿಷೇಧಿಸಿರುವುದು ಸರ್ಕಾರದ ವಿವೇಚನಾ ರಹಿತ ನಿರ್ಧಾರ” ಎಂದು ವಾದಿಸಿದ್ದರು.
ಸರ್ಕಾರದ ಸಮರ್ಥನೆ
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮತ್ತೊಮ್ಮೆ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಲಭ್ಯವಿರುವ ಅತ್ಯಂತ ಸೂಕ್ತ ಹಾಗೂ ಸೀಮಿತ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು. ಟೆಲಿಗ್ರಾಂನ ವಿಶಿಷ್ಟ ಸಾಫ್ಟ್‌ವೇರ್ ವಿನ್ಯಾಸ ಮತ್ತು ಗೌಪ್ಯತಾ ನಿಯಮಗಳಿಂದಾಗಿ ತನಿಖಾ ಸಂಸ್ಥೆಗಳಿಗೆ ತಕ್ಷಣದ ಹಸ್ತಕ್ಷೇಪ ಕಷ್ಟಸಾಧ್ಯ. ಖಾತೆಯನ್ನು ಡಿಲೀಟ್ ಮಾಡಿದರೆ ಅದರಲ್ಲಿರುವ ಡೇಟಾ, ಸಂದೇಶಗಳೂ ಸಂಪೂರ್ಣವಾಗಿ ಅಳಿಸಿಹೋಗುವುದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆ ಹೆಚ್ಚು ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯವು ಸರ್ಕಾರದ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂದು ತೀರ್ಪು ನೀಡಿದೆ.

























