
ಬೆಂಗಳೂರು, ಜೂ. ೧೬- ರಾಜ್ಯದಲ್ಲಿ ನೈರುತ್ಯ ಮುಂಗಾರು ಕೊರತೆಯಿಂದ ಬರದ ಆತಂಕ ಎದುರಾಗಿದ್ದು ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕುಡಿಯುವ ನೀರಿಗು ತತ್ವಾರವಾಗಲಿದೆ ದೇಶ ಹಾಗೂ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದು ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆ ಗಿಂತ ಶೇಕಡ ೨೧ರಷ್ಟು ಕಡಿಮೆಯಾಗಿದೆ ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ ಹಾಗಾಗಿ ಬರದ ಆತಂಕದ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ ಮಳೆ ಕೊರತೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ದಿನಗಳಲ್ಲೂ ಮಳೆ ಕೊರತೆ ಮುಂದುವರಿದರೆ ಬರ ಪರಿಸ್ಥಿತಿಯನ್ನು ಎದುರಿಸಲು ತಯಾರಿ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ
‘ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಜಲಾಯನ ಪ್ರದೇಶದಲ್ಲೂ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ ಈ ವರ್ಷ ಕಾವೇರಿ ಕಣಿವೆಯಲ್ಲಿ ಶೇಕಡ ೩೬ರಷ್ಟು ಮಳೆ ಕೊರತೆ ಆಗಿದೆ ಇಷ್ಟೇ ಅಲ್ಲದೆ ಕರಾವಳಿಯಲ್ಲೂ ಶೇಕಡ ೪೧% ರಷ್ಟು ಮಳೆ ಕಡಿಮೆಯಾಗಿದೆ .
ರಾಜ್ಯ ಅಷ್ಟೇ ಅಲ್ಲ ಇಡೀ ದೇಶದಲ್ಲೇ ಮಳೆ ಕೊರತೆ ಉಂಟಾಗಿದೆ ನೈರುತ್ಯ ಮುಂಗಾರಿನ ಮಳೆ ಕೊರತೆ ಇಡೀ ದೇಶದಲ್ಲಿ ಶೇಕಡ ೪೦ರಷ್ಟು ಆಗಿದ್ದು ಅಣೆಕಟ್ಟುಗಳು ಖಾಲಿಯಾಗಿವೆ.
ಇನ್ನು ಒಂದು ವಾರ ಮಳೆ ಇಲ್ಲ
ಮುಂಗಾರು ಮಾರುತಗಳು ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರೂ, ವ್ಯಾಪಕ ಮಳೆಯಾಗುವ ಪ್ರಕ್ರಿಯೆ ಮುಂದಿನ ಕನಿಷ್ಠ ಒಂದು ವಾರದ ಮಟ್ಟಿಗೆ ತಣ್ಣಗಾಗುವ ಸಾಧ್ಯತೆಯಿದೆ. ಹವಾಮಾನ ಮಾದರಿಗಳ ಪ್ರಕಾರ, ಪ್ರಸ್ತುತ ಉಂಟಾಗಿರುವ ಈ ಮಳೆ ಕೊರತೆಯು ಜೂನ್ ೨೩ರ ಆಸುಪಾಸಿನವರೆಗೂ ಮುಂದುವರಿಯಲಿದ್ದು, ಆ ನಂತರವಷ್ಟೇ ಮುಂಗಾರು ಚುರುಕಾಗುವ ಮುನ್ಸೂಚನೆ ಲಭ್ಯವಾಗಿದೆ.
ಹವಾಮಾನ ತಜ್ಞರ ಪ್ರಕಾರ, ಮುಂಗಾರು ಮಾರುತಗಳು ಈಗಾಗಲೇ ಮಧ್ಯ ಹಾಗೂ ಪೂರ್ವ ಭಾರತದ ಹಲವು ಭಾಗಗಳಿಗೆ ಪ್ರವೇಶಿಸಿವೆ. ಆದರೆ, ಮಳೆ ತರುವ ಈ ಮಾರುತಗಳ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ. ಜೂನ್ ೧೫ ರಿಂದ ಜೂನ್ ೨೧ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ನಿಷ್ಕ್ರಿಯವಾಗಿರಲಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಮಳೆ ಕೊರತೆ ಮತ್ತಷ್ಟು ತೀವ್ರಗೊಳ್ಳುವ ಆತಂಕ ಮೂಡಿದೆ.
ಮುಂಗಾರಿನ ವ್ಯಾಪಕ ಮಳೆಯ ಅನುಪಸ್ಥಿತಿಯಲ್ಲಿ, ಮುಂದಿನ ವಾರ ಲಭ್ಯವಾಗುವ ಬಹುತೇಕ ಮಳೆಯು ಸ್ಥಳೀಯವಾಗಿ ಸೃಷ್ಟಿಯಾಗುವ ಗುಡುಗು ಸಹಿತ ಮಳೆಯ ರೂಪದಲ್ಲಿರಲಿದೆ. ವಿಶೇಷವಾಗಿ ದಕ್ಷಿಣ ಭಾರತದ ಭಾಗಗಳಲ್ಲಿ ಇದು ಕಂಡುಬರಲಿದೆ. ಕರ್ನಾಟಕ-ಆಂಧ್ರಪ್ರದೇಶ-ತಮಿಳುನಾಡು ಗಡಿ ಭಾಗಗಳು ಹಾಗೂ ಪೂರ್ವ ಘಟ್ಟಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ತೀವ್ರ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಾರುತಗಳು ಮಹಾರಾಷ್ಟ್ರ, ಕರ್ನಾಟಕದ ಉಳಿದ ಭಾಗಗಳು, ತೆಲಂಗಾಣ, ಒಡಿಶಾ, ಜಾರ್ಖಂಡ್, ಬಿಹಾರ್ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳಿಗೆ ಮುಂದಿನ ೪-೫ ದಿನಗಳಲ್ಲಿ ಮುನ್ನಡೆಯಲು ವಾತಾವರಣ ಪೂರಕವಾಗಿದೆ. ಆದರೆ, ಮುಂಗಾರು ಮಾರುತಗಳ ’ಮುನ್ನಡೆ’ ಮತ್ತು ಅವುಗಳಿಂದಾಗುವ ’ಮಳೆ ಪ್ರಕ್ರಿಯೆ’ ಒಂದೇ ಅಲ್ಲ ಎನ್ನುತ್ತಾರೆ ತಜ್ಞರು. ನಕ್ಷೆಯಲ್ಲಿ ಮಾರುತಗಳು ಉತ್ತರ ಭಾರತದ ಕಡೆಗೆ ಚಲಿಸುತ್ತಿದ್ದರೂ, ವ್ಯಾಪಕ ಮಳೆಗೆ ಬೇಕಾದ ಬಲವಾದ ವಾತಾವರಣದ ಒತ್ತಡ ಸದ್ಯಕ್ಕೆ ಸೃಷ್ಟಿಯಾಗಿಲ್ಲ.
ಜೂನ್ ದ್ವಿತೀಯಾರ್ಧದಲ್ಲಿ ಹವಾಮಾನದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಬರಲಿದೆ. ಜೂನ್ ೨೨ ರಿಂದ ೨೮ರ ಅವಧಿಯಲ್ಲಿ ಒಳಕರ್ನಾಟಕ, ಆಂಧ್ರ-ಕರ್ನಾಟಕ ಗಡಿ ಪ್ರದೇಶ, ದಕ್ಷಿಣ ತಮಿಳುನಾಡು ಹಾಗೂ ಕೇರಳದ ಪಶ್ಚಿಮ ಘಟ್ಟಗಳ ಭಾಗದಲ್ಲಿ ಗುಡುಗು ಮಳೆ ತೀವ್ರಗೊಳ್ಳಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕ, ಕರಾವಳಿ ಕೇರಳ ಮತ್ತು ಮುಂಬೈವರೆಗಿನ ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸಾಧಾರಣವಾಗಿ ಹೆಚ್ಚಾಗಲಿದೆ.
ಹವಾಮಾನ ಇಲಾಖೆಯ ವಿವಿಧ ಮಾದರಿಗಳ ಪ್ರಕಾರ, ಜೂನ್ ೨೯ ರಿಂದ ಜುಲೈ ೫ರ ಅವಧಿಯಲ್ಲಿ ನೈಋತ್ಯ ಮುಂಗಾರು ಅಸಲಿ ಬಲ ಪಡೆದುಕೊಂಡು ಪುನಶ್ಚೇತನಗೊಳ್ಳುವ ಸಾಧ್ಯತೆಯಿದೆ. ದಕ್ಷಿಣ ಕೇರಳದ ಪಶ್ಚಿಮ ಘಟ್ಟಗಳು ಮತ್ತು ಕೊಂಕಣ ಕರಾವಳಿ ಭಾಗಗಳು ಮೊಟ್ಟಮೊದಲಿಗೆ ಭಾರಿ ಮಳೆಯ ಮುಂಗಾರು ಆರ್ಭಟಕ್ಕೆ ಸಾಕ್ಷಿಯಾಗಲಿವೆ. ಪ್ರಸ್ತುತ ಉಪಗ್ರಹ ಚಿತ್ರಗಳು ಮಳೆಯ ಮೋಡಗಳ ಕೊರತೆಯನ್ನು ತೋರಿಸುತ್ತಿದ್ದು, ಜೂನ್ ಕೊನೆಯ ವಾರದಲ್ಲಿ ಮುಂಗಾರು ಚುರುಕಾಗುವ ಪ್ರಕ್ರಿಯೆಯನ್ನು ಹವಾಮಾನ ವಿಶ್ಲೇಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲಿಯವರೆಗೂ ದೇಶವು ಮುಂಗಾರಿನ ಬದಲು ಸ್ಥಳೀಯ ಗುಡುಗು ಮಳೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಕಾಟಾಚಾರ ಸಭೆಯಿಂದ ಬರ ಎದುರಿಸಲು ಆಗಲ್ಲ: ಅಶೋಕ್
“ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ” ಎಂದು ಮಾಧ್ಯಮಗಳಿಗೆ ಪೋಸ್ ಕೊಟ್ಟರೆ ಏನು ಪ್ರಯೋಜನವಿಲ್ಲ. ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೀವೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ ಇನ್ನು ಶೇ. ೩೦ ರಷ್ಟು ಮಳೆಯೂ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ಬರೀ ಎಸಿ ಕೋಣೆಯಲ್ಲಿ ಕೂತು ಕಾಟಾಚಾರದ ಸಭೆ ನಡೆಸಿದರೆ, ಮಾಧ್ಯಮಗಳಿಗೆ ಒಂದು ಹಾರಿಕೆಯ ಹೇಳಿಕೆ ಕೊಟ್ಟುಬಿಟ್ಟರೆ ಬರ ನೀಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಬರಗಾಲ ಎದುರಿಸೋಕೆ, ರೈತರ ಕಷ್ಟ ಕೇಳೋಕೆ ರಾಜ್ಯದಲ್ಲಿ ಕೃಷಿ ಸಚಿವರು ಎಲ್ಲಿದ್ದಾರೆ ಸ್ವಾಮಿ
ಬರಪೀಡಿತ ತಾಲೂಕುಗಳಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದಾರೆ. ಈ ತಾಪತ್ರಯ ವಿಚಾರಿಸಬೇಕಾದ ನಿಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎಲ್ಲಿದ್ದಾರೆ ಸ್ವಾಮಿ
ನಿಮ್ಮದೇ ಶಾಸಕರ ಮುನಿಸು, ಆಂತರಿಕ ಅಸಮಾಧಾನವನ್ನು ಎದುರಿಸಲಾಗದೆ ಮುಕ್ಕಾಲು ಸಂಪುಟವನ್ನು ಖಾಲಿ ಇಟ್ಟುಕೊಂಡಿರುವ ತಾವು ರಾಜ್ಯದ ಬರಗಾಲ ಎದುರಿಸುತ್ತೀರಿ ಎಂದು ಕನ್ನಡಿಗರು ಹೇಗೆ ತಾನೇ ನಂಬಿಯಾರು ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಧಿಕಾರದ ಹಪಾಹಪಿಗೆ ಬಿದ್ದು ಆಡಳಿತವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಕೇವಲ ಅಸಹಾಯಕ, ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಗಳಾಗಿ ನೀವು ಇತಿಹಾಸ ಸೇರುತ್ತೀರಿ. ಈ ಪೊಳ್ಳು ಹೇಳಿಕೆಗಳನ್ನು ಕೊಡುವುದು ಬಿಟ್ಟು, ತಕ್ಷಣವೇ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡಿ ಬರ ಪರಿಹಾರ ಕಾರ್ಯಕ್ಕೆ ಮಂತ್ರಿಗಳನ್ನು ಹಳ್ಳಿ ಹಳ್ಳಿಗಳಿಗೆ ಇಳಿಸಿ, ಇಲ್ಲದಿದ್ದರೆ ಕನ್ನಡಿಗರ ಆಕ್ರೋಶ ಎದುರಿಸಬೇಕಾಗುತ್ತದೆ! ಎಂದು ಆರ್.ಅಶೋಕ್ ಹೇಳಿದ್ದಾರೆ.




























