
ವಿಜಯನಗರ, ಜೂ.೨೪: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಅಣೆಕಟ್ಟೆಯಲ್ಲಿ ನೂತನವಾಗಿ ಅಳವಡಿಸಲಾಗಿರುವ ೩೩ ಕ್ರೆಸ್ಟ್ ಗೇಟ್‌ಗಳ ಉದ್ಘಾಟನೆ ನಾಳೆ ನಡೆಯಲಿದ್ದು, ಈ ಕಾರ್ಯಕ್ರಮ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ.
ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದು, ತುಂಗಭದ್ರಾ ಅಣೆಕಟ್ಟೆ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆಯುತ್ತಿದೆ.
ಮುನಿರಾಬಾದ್‌ನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇತೃತ್ವ ವಹಿಸಲಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಅಣೆಕಟ್ಟೆ ಮೇಲೆಯೇ ಮೊದಲು ನೂತನ ಕ್ರೆಸ್ಟ್ ಗೇಟ್‌ಗಳ ಉದ್ಘಾಟನೆ ನೆರವೇರಲಿದ್ದು, ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ತುಂಗಭದ್ರಾ ಜಲಾಶಯದ ಹೂಳು ತೆರವು, ಸಮಾನಾಂತರ ಜಲಾಶಯ ನಿರ್ಮಾಣ ಸೇರಿದಂತೆ ಪ್ರಮುಖ ಜಲಸಂಪನ್ಮೂಲ ಯೋಜನೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಯುವ ಸಾಧ್ಯತೆಯಿದೆ.
೨೦೨೪ರ ಆಗಸ್ಟ್ ೧೦ರಂದು ರಾತ್ರಿ ತುಂಗಭದ್ರಾ ಅಣೆಕಟ್ಟೆಯ ೧೯ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದ್ದ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಪರಿಣಾಮವಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿದ್ದು, ರೈತರಲ್ಲಿ ಕಳವಳ ಮೂಡಿಸಿತ್ತು.
ಈ ಘಟನೆ ನಡೆದ ತಕ್ಷಣ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಂಡಿದ್ದರು. ತಜ್ಞರ ಸಲಹೆ ಮೇರೆಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರಿನ ಹರಿವನ್ನು ನಿಯಂತ್ರಿಸಲಾಗಿತ್ತು. ಆದಾಗ್ಯೂ ಸುಮಾರು ೩೫ ಟಿಎಂಸಿ ಅಡಿ ನೀರು ನದಿಗೆ ಹರಿದು ಹೋಗಿತ್ತು. ನಂತರ ಸರ್ಕಾರ ಎಲ್ಲ ೩೩ ಕ್ರೆಸ್ಟ್ ಗೇಟ್‌ಗಳನ್ನು ಬದಲಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.
೭೦ ವರ್ಷಗಳ ಬಳಿಕ ಸಂಪೂರ್ಣ ಗೇಟ್ ಬದಲಾವಣೆ: ೧೯೪೫ರಲ್ಲಿ ಆರಂಭಗೊಂಡ ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಕಾಮಗಾರಿ ೧೯೫೩ರಲ್ಲಿ ಪೂರ್ಣಗೊಂಡಿತ್ತು. ೧೯೫೩ರಿಂದ ೧೯೫೮ರ ಅವಧಿಯಲ್ಲಿ ಅಳವಡಿಸಲಾದ ಕ್ರೆಸ್ಟ್ ಗೇಟ್‌ಗಳು ಸುಮಾರು ಏಳು ದಶಕಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದವು. ಈಗ ಮೊದಲ ಬಾರಿಗೆ ಎಲ್ಲ ೩೩ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಿಸಿ ನೂತನ ಗೇಟ್‌ಗಳನ್ನು ಅಳವಡಿಸಲಾಗಿದೆ.
ಉದ್ಘಾಟನೆಗೆ ಮುನ್ನ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಡಿ.ಕೆ. ಶಿವಕುಮಾರ್ ಅವರು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಸರ್ಕಾರ ನುಡಿದಂತೆ ನಡೆದುಕೊಂಡಿದೆ. ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯ ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಭದ್ರತಾ ಸಿದ್ಧತೆ ಪೂರ್ಣ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುನಿರಾಬಾದ್ ಹಾಗೂ ಅಣೆಕಟ್ಟೆ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಾವಿರಾರು ರೈತರು, ಸಾರ್ವಜನಿಕರು ಮತ್ತು ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.





























