
ಯಾದಗಿರಿ: ಗುರುಮಠಕಲ್ ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಲೆಮಾರಿ, ಭಿಕ್ಷುಕ ಹಾಗೂ ಬುಡಗ ಜಂಗಮ ಜನಾಂಗದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಸರ್ವೇ ನಡೆಸಿ, ಸೂಕ್ತ ಭೂಮಿ ಗುರುತಿಸಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಗಮನ ಸೆಳೆಯುವ ಸೂಚನೆ ಮೂಲಕ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುರುಮಠಕಲ್ ಪಟ್ಟಣದ ವಾರ್ಡ್ ನಂ.೧೪ರ ಭಿಕ್ಷುಕರ ಕಾಲೋನಿಯಲ್ಲಿ ೧೯೯೩ರಲ್ಲಿ ಸರ್ಕಾರದಿಂದ ಒಟ್ಟು ೪೮ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿತ್ತು. ಆದರೆ ಪ್ರಸ್ತುತ ಈ ಕಟ್ಟಡಗಳು ವಾಸಕ್ಕೆ ಯೋಗ್ಯವಲ್ಲ ಎಂದು ತಹಶೀಲ್ದಾರರು ವರದಿ ನೀಡಿದ್ದಾರೆ ಎಂದು ವಿವರಿಸಿದರು.
ಕಾಲಕ್ರಮೇಣ ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಸ್ತುತ ಸುಮಾರು ೧೦೦ರಿಂದ ೧೨೦ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ವಾಸಯೋಗ್ಯ ಕಟ್ಟಡಗಳ ಕೊರತೆಯಿಂದಾಗಿ ಭಿಕ್ಷುಕರು, ಅಲೆಮಾರಿ ಹಾಗೂ ಬುಡಗ ಜಂಗಮ ಸಮುದಾಯದ ಅನೇಕ ಕುಟುಂಬಗಳು ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವರು ತಿಳಿಸಿದರು.
ವಸತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ೨೦೨೪ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ?೧.೫೦ ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ?೩ ಲಕ್ಷ ಸೇರಿ ಒಟ್ಟು ?೪.೫೦ ಲಕ್ಷ ನೆರವು ನೀಡಲಾಗುತ್ತಿದೆ.
ಅದೇ ರೀತಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ?೧.೫೦ ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ?೨ ಲಕ್ಷ ಸೇರಿದಂತೆ ಒಟ್ಟು ?೩.೫೦ ಲಕ್ಷ ಸಹಾಯಧನ ನೀಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸದನಕ್ಕೆ ಮಾಹಿತಿ ನೀಡಿದರು.
ಗುರುಮಠಕಲ್ ಪಟ್ಟಣದ ಭಿಕ್ಷುಕರ ಕಾಲೋನಿ ಹಾಗೂ ಸುತ್ತಮುತ್ತ ವಾಸಿಸುತ್ತಿರುವ ಅಲೆಮಾರಿ ಮತ್ತು ಇತರೆ ಅರ್ಹ ಕುಟುಂಬಗಳ ಕುರಿತು ಜಿಲ್ಲಾಡಳಿತದಿಂದ ಶೀಘ್ರ ಸರ್ವೇ ನಡೆಸಿ, ಮನೆ ನಿರ್ಮಾಣಕ್ಕೆ ಸೂಕ್ತ ಸರ್ಕಾರಿ ಭೂಮಿಯನ್ನು ಗುರುತಿಸಬೇಕು. ಬಳಿಕ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದರೆ, ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ೨.೦-ಬಿಎಲ್‌ಸಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಿಯಮಾನುಸಾರ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಲೆಮಾರಿ ಹಾಗೂ ವಸತಿಹೀನ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಮಹತ್ವದ್ದಾಗಿದ್ದು, ಜಿಲ್ಲಾಡಳಿತದ ಸರ್ವೇ ಹಾಗೂ ಮುಂದಿನ ಪ್ರಕ್ರಿಯೆಯತ್ತ ಇದೀಗ ಜನರ ಗಮನ ನೆಟ್ಟಿದೆ.





























