Home ಜಿಲ್ಲೆ ಉಪಲೋಕಾಯುಕ್ತರಿಂದ ವಿದ್ಯಾರ್ಥಿನಿಲಯಗಳ ದಿಢೀರ್ ಪರಿಶೀಲನೆ

ಉಪಲೋಕಾಯುಕ್ತರಿಂದ ವಿದ್ಯಾರ್ಥಿನಿಲಯಗಳ ದಿಢೀರ್ ಪರಿಶೀಲನೆ

ಗದಗ, ಆ. ೯: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬುಧವಾರ ಗದಗ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳು, ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ವಿದ್ಯಾರ್ಥಿನಿಯರ ಕಲ್ಯಾಣಕ್ಕೆ ಸಂಬAಧಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.

ಮೊದಲು ಸಿಡಿಒ ಜೈನ್ ಶಾಲೆ ಸಮೀಪದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ವಸತಿ ನಿಲಯದ ಕೊಠಡಿಗಳು, ಅಡುಗೆಮನೆ, ಊಟದ ವ್ಯವಸ್ಥೆ, ಶೌಚಾಲಯ ಹಾಗೂ ಇತರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ವಿದ್ಯಾರ್ಥಿನಿಯರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಲೋಕಾಯುಕ್ತರಾದ ಕೆ ಎನ್ ಪಣೀಂದ್ರ ಅವರು, ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಛತೆಗೆ ಅತ್ಯುನ್ನತ ಆದ್ಯತೆ ನೀಡಬೇಕು. ಸರ್ಕಾರದಿಂದ ಒದಗಿಸಲಾಗುತ್ತಿರುವ ಎಲ್ಲಾ ಸೌಲಭ್ಯಗಳು ವಿದ್ಯಾರ್ಥಿನಿಯರಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ವಸತಿ ನಿಲಯದಲ್ಲಿದ್ದ ಪ್ಯಾಡ್ ಬರ್ನ್ ಯಂತ್ರ ದುರಸ್ತಿಯಲ್ಲಿರುವುದನ್ನು ಗಮನಿಸಿದ ಅವರು, ಅದನ್ನು ತಕ್ಷಣವೇ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ವಿದ್ಯಾರ್ಥಿನಿಯರಲ್ಲಿ ಸಾಮಾನ್ಯ ಜ್ಞಾನ ಮತ್ತು ಓದುವ ಅಭ್ಯಾಸ ಬೆಳೆಸುವ ಉದ್ದೇಶದಿಂದ ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದ ತಲಾ ಒಂದು ದಿನಪತ್ರಿಕೆಯನ್ನು ನಿಯಮಿತವಾಗಿ ತರಿಸುವಂತೆ ಸೂಚಿಸಿದರು. ಪ್ರಸ್ತುತ ಇರುವ ಕಂಪ್ಯೂಟರ್‌ಗಳ ಸಂಖ್ಯೆ ವಿದ್ಯಾರ್ಥಿನಿಯರ ಅಗತ್ಯಕ್ಕೆ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಕಂಪ್ಯೂಟರ್‌ಗಳನ್ನು ಒದಗಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ವಿದ್ಯಾಭ್ಯಾಸ ನಿಮ್ಮ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ನೆರವಾಗಬೇಕು. ಪ್ರಾಮಾಣಿಕತೆ, ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣಕ್ಕೆ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದೆ ಉದ್ಯೋಗಕ್ಕೆ ಸೇರಿದಾಗ ಲಂಚ ಪಡೆಯುವುದಿಲ್ಲ, ಲಂಚ ನೀಡುವುದಿಲ್ಲ ಎಂಬ ಸಂಕಲ್ಪವನ್ನು ಇಂದೇ ಮಾಡಬೇಕು. ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಸಂವಿಧಾನದ ಆದರ್ಶಗಳಿಗೆ ಬದ್ಧರಾಗಿ ಜೀವನ ನಡೆಸಬೇಕು. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು” ಎಂದು ಕರೆ ನೀಡಿದರು.

ಬಳಿಕ ಅವರು ಟಿಪುö್ಪ ವೃತ್ತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಯೂ ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ವಸತಿ ನಿಲಯದ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಈ ವೇಳೆ ವಿದ್ಯಾರ್ಥಿನಿಯರು ಕುಡಿಯುವ ನೀರಿನ ಸಮಸ್ಯೆ, ಕೋಣೆಗಳಲ್ಲಿ ಇಲಿಗಳ ಕಾಟ, ದಿನಪತ್ರಿಕೆಗಳು ಬರದಿರುವುದು, ಗ್ರಂಥಾಲಯ ಹಾಗೂ ಕಂಪ್ಯೂಟರ್‌ಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಉಪಲೋಕಾಯುಕ್ತರ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಅಲ್ಲದೆ, ವಿದ್ಯಾರ್ಥಿನಿಲಯವನ್ನು ತಮ್ಮ ಮನೆಯಂತೆ ಭಾವಿಸಿ ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ವಸತಿ ನಿಲಯಗಳಲ್ಲಿ ಗುಣಮಟ್ಟದ ಹಾಗೂ ನಿಗದಿತ ಪ್ರಮಾಣದ ಆಹಾರ ಪೂರೈಕೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ ವೇಳೆ ಹಿರಿಯ ನ್ಯಾಯಾಧೀಶರು ಹಾಗೂ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ ಆರ್. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಲೋಕಾಯುಕ್ತ ಉಪಾಧೀಕ್ಷಕ ಲೋಕೆಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.