
ತುಮಕೂರು, ಅ. ೧೦- ಡ್ರಗ್ಸ್ ಹಾವಳಿ ವಿರುದ್ದದ ಹೋರಾಟಕ್ಕೆ ವಿದ್ಯಾರ್ಥಿಗಳೇ ಮೊದಲ ರಕ್ಷಕರಾಗಬೇಕು ಎಂದು ತುಮಕೂರು ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್ ಹೇಳಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಏರ್ಪಡಿಸಿದ್ದ ನೂತನವಾಗಿ ಪ್ರವೇಶ ಪಡೆದಿರುವ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿಯ ಸಂಕೇತವಾಗಿರುವ ಬಿಳಿವರ್ಣದ ಸಮವಸ್ತ್ರಧಾರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವೈದ್ಯಕೀಯ ಕ್ಷೇತ್ರದವರು ಈ ವ್ಯಸನದಿಂದ ಹೊರತಾಗಿಲ್ಲ. ಮಾದಕ ವ್ಯಸನ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಮೊದಲ ಸಾಲಿನ ರಕ್ಷಕರಾಗಬೇಕು ಎಂದು ಸಲಹೆ ನೀಡಿದರು.
ಆರೋಗ್ಯವಂತ ಸಮಾಜ ನಿರ್ಮಾಣವೇ ತುಮಕೂರು ಪೋಲೀಸ್ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜಿನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕವನ್ನು ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಲೇಜಿನ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಪೋಲೀಸ್ ಮಾರ್ಷಲ್ ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶೀಘ್ರವೇ ಇದಕ್ಕೆ ಅಂತಿಮ ಸ್ವರೂಪ ನೀಡಲಾಗುವುದು ಎಂದು ಹೇಳಿದರು.
ವೈದ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್ ಮಾತನಾಡಿ, ಪ್ರೀತಿ ಮತ್ತು ಸಹಾನುಭೂತಿ ವೈದ್ಯರಿಗೆ ಇರಬೇಕಾದ ಮೊದಲನೇ ಗುಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರತಿಪಾದಿಸಿರುವ ೭ ಪ್ರಮುಖ ಅಂಶಗಳಾದ ವೈದ್ಯ, ನಾಯಕ, ಸಂವಹನಾಕಾರ, ಜೀವಮಾನ, ಕಲಿಯುವವ, ವೃತ್ತಿಪರ, ವಿಮಾರ್ಶಾತ್ಮಕ, ಚಿಂತಕ ಮತ್ತು ಸಂಶೋಧಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಒಬ್ಬ ಪರಿಪೂರ್ಣ ವೈದ್ಯರಾಗಲು ಕಾಲೇಜಿಗೆ ಹೊಂದಿಕೊಂಡಂತೆ ಸಾವಿರ ಬೆಡ್ ಆಸ್ಪತ್ರೆ ಇದೆ. ಕಲಿಕೆಗೆ ಉತ್ತಮ ಪರಿಸರವಿದೆ ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಒಬ್ಬ ವೈದ್ಯರನ್ನು ತಯಾರು ಮಾಡಲು ಸರ್ಕಾರ ೨೫-೩೦ ಲಕ್ಷ ರೂಪಾಯಿ ವೆಚ್ಚ ಮಾಡುತ್ತದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿಯಬೇಕು. ಹಣ ಮತ್ತು ಹೆಸರು ಗಳಿಸುವುದೇ ವೈದ್ಯರ ಗುರಿಯಾಗಬಾರದು. ರೋಗಿಗಳ ಸೇವೆಯೇ ನಿಜವಾದ ಮಾನವೀಯ ಸೇವೆ ಎಂಬದನ್ನು ಅರ್ಥಮಾಡಿಕೊಂಡು ಜೀವನ ಪೂರ್ತಿ ಕಲಿಯುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವೈದ್ಯಕೀಯ ವಲಯ ದಲ್ಲಿ ಉತ್ತಮ ಸಾಧನೆ ಮಾಡುವ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದು, ಅದನ್ನು ಗಳಿಸುವ ಕಡೆಗೆ ನಿಮ್ಮ ಗಮನ ಇರಬೇಕು. ಕಾಲೇಜಿನಲ್ಲಿ ಉತ್ತಮ ಮೂಲ ಸೌಕರ್ಯ ಒದಗಿಸಲಾಗಿದೆ. ತಂದೆ-ತಾಯಿಯವರ ಕನಸು ಮತ್ತು ಸಮಾಜದ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಪ್ರದೀಪ್ ಕುಮಾರ್ ವೇಗಿ ಅವರಿಗೆ ಪ್ರತಿಷ್ಠಿತ ಕಲಾಂ ಮೆಡಲ್ ಆಫ್ ಎಕ್ಸ್‌ಲೆನ್ಸ್ ಇನ್ ಬಯೋಮೆಡಿಕಲ್ ಅಡ್ವಾನ್ಸಸ್- ೨೦೨೬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀನೋಮಿಕ್ ಸಂಶೋಧನೆ, ಆಣ್ವಿಕ ಜೀವಶಾಸ್ತ್ರ ಹಾಗೂ ಅನುವಾದಾತ್ಮಕ ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಮಹತ್ವದ ಕೊಡುಗೆಗಾಗಿ ಈ ಗೌರವ ಸಂದಿದೆ.
ಸಮಾರಂಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರ ತಜ್ಞೆ ಡಾ.ಲಾವಣ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ್ ಜೆ.ವಿ., ಉಪಪ್ರಾಂಶುಪಾಲೆ ಡಾ.ರೇಖಾ ಗುರುಮೂರ್ತಿ, ಆಡಳಿತ ವಿಭಾಗದ ಉಪಪ್ರಾಂಶುಪಾಲ ಡಾ.ಎಂ.ಎನ್.ಹೇಮಂತ್‌ರಾಜ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಪೋಷಕರು ಭಾಗವಹಿಸಿದ್ದರು.


























