Home ಮುಖಪುಟ ಸುದ್ದಿ ಬೀದಿ ನಾಯಿಗಳ ತೆರವು ಆದೇಶ ಮಾರ್ಪಾಡಿಲ್ಲ

ಬೀದಿ ನಾಯಿಗಳ ತೆರವು ಆದೇಶ ಮಾರ್ಪಾಡಿಲ್ಲ

ಸುಪ್ರೀಂ ಸ್ಪಷ್ಟನೆ
ನವದೆಹಲಿ,ಮೇ೧೯: ಆಸ್ಪತ್ರೆ, ಶಾಲೆ, ಕಾಲೇಜು, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ತಾನು ೨೦೨೫ರ ನವೆಂಬರ್‌ನಲ್ಲಿ ನೀಡಿದ್ದ ಆದೇಶವನ್ನು ಮಾರ್ಪಡಿಸಲು ಅಥವಾ ಹಿಂಪಡೆಯಲು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟವಾಗಿ ನಿರಾಕರಿಸಿದೆ.


ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ಕಟು ವಾಸ್ತವಕ್ಕೆ ತಾನು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.ಬೀದಿ ನಾಯಿಗಳ ಕಡಿತ ಹಾಗೂ ದಾಳಿಯ ಘಟನೆಗಳು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಆತಂಕವನ್ನು ತಂದೊಡ್ಡಿವೆ. ವಿಶೇಷವಾಗಿ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಿದೇಶಿ ಪ್ರವಾಸಿಗರು ಇಂತಹ ದಾಳಿಗಳಿಗೆ ತುತ್ತಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ಪೀಠವು ಗಂಭೀರವಾಗಿ ಪರಿಗಣಿಸಿದೆ.


ನೆಲದ ಮಟ್ಟದಲ್ಲಿ ಸದ್ಯ ’ಬಲಿಷ್ಠನಷ್ಟೇ ಬದುಕಲು ಸಾಧ್ಯ’ (ಡಾರ್ವಿನ್ ಸಿದ್ಧಾಂತ) ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಕಡೆಯಿಂದ ಪರಿಣಾಮಕಾರಿ ಕ್ರಮಗಳಿಲ್ಲದ ಕಾರಣ, ಸಮಾಜದ ದುರ್ಬಲ ವರ್ಗದವರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಮಕ್ಕಳು ಮತ್ತು ವೃದ್ಧರನ್ನು ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಒಂಟಿಯಾಗಿ ಬಿಡಲು ಸಾಧ್ಯವಿಲ್ಲ. ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಭದ್ರತೆಯನ್ನು ಖಾತರಿಪಡಿಸುವುದು ಆಯಾ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಪೀಠವು ಒತ್ತಿಹೇಳಿದೆ. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ನಾಯಿಗಳ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ತನ್ನ ಹಿಂದಿನ ಆದೇಶವನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.