
ಬೆಂಗಳೂರು.ಮೇ೧೯:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.
ತುಮಕೂರಿನಲ್ಲಿ ಇಂದು ನಡೆಯುತ್ತಿರುವುದು ಸರ್ಕಾರದ ಸಾಧನಾ ಸಮಾವೇಶ ಅಲ್ಲ, ಅದು ಸತ್ತ ಸರ್ಕಾರದ ಸಮಾರಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ತುಮಕೂರು ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಜಾಹೀರಾತುಗಳ ಭಾಷೆಯನ್ನು ಉಲ್ಲೇಖಿಸಿ ಲೇವಡಿ ಮಾಡಿದ ವಿಜಯೇಂದ್ರ, “ಗ್ಯಾರಂಟಿ ಹಬ್ಬ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ, ಸಮರ್ಪಣೆ, ಸಂಕಲ್ಪ, ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ ಎಂದು ಪತ್ರಿಕೆಗಳಿಗೆ ದೊಡ್ಡ ದೊಡ್ಡ ಜಾಹೀರಾತು ನೀಡಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಮಾಡುತ್ತೇನೆ, ಯಾವ ಪುರುಷಾರ್ಥಕ್ಕೆ ಈ ಸಾಧನಾ ಸಮಾವೇಶ ಮಾಡುತ್ತಿದ್ದೀರಿ? ಕಳೆದ ಮೂರು ವರ್ಷಗಳಲ್ಲಿ ತಾವು ಮಾಡಿದ ಸಾಧನೆಯಾದರೂ ಏನು ರಾಜ್ಯದಲ್ಲಿ ಏನಾದರೂ ಹೊಸ ಯೋಜನೆಗಳನ್ನು ತಂದಿದ್ದೀರಾ?” ಎಂದು ಪ್ರಶ್ನಿಸಿದರು.
“ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ, ಸುದೀರ್ಘ ಕಾಲ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಆದರೆ, ಅಹಿಂದ ವರ್ಗವನ್ನು ಕೇವಲ ದುರ್ಬಳಕೆ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದ ಪರಿಸ್ಥಿತಿ ನೋಡಿದರೆ, ಅವರು ’ಮನೆಗೆ ಮಗನೂ ಆಗಲಿಲ್ಲ, ಊರಿಗೆ ಉಪಕಾರಿಯೂ ಆಗಲಿಲ್ಲ’ ಎನ್ನುವಂತಾಗಿದೆ. ಇಡೀ ರಾಜ್ಯವನ್ನು ಸಾಲದ ಶೂಲಕ್ಕೆ ನೂಕಿ ಅರಾಜಕತೆ ಸೃಷ್ಟಿಸಿದ್ದಾರೆ. ಎಂದು ಬಿ.ವೈ. ವಿಜಯೇಂದ್ರ ದೂರಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳು ಸಂಪೂರ್ಣ ಕುಸಿದುಬಿದ್ದಿವೆ. ನೀರಾವರಿಗೆ ಹಣ ಕೊಟ್ಟಿಲ್ಲ, ಆಸ್ಪತ್ರೆ ಮತ್ತು ಶಾಲೆಗಳಿಗೆ ಆದ್ಯತೆ ನೀಡಿಲ್ಲ. ಶಾಸಕರ ಕ್ಷೇತ್ರಗಳಿಗೆ ಕಿಂಚಿತ್ತೂ ಅನುದಾನ ನೀಡಿಲ್ಲ. ನಿಮ್ಮ ಯೋಗ್ಯತೆಗೆ ಒಂದು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಬರ ಮತ್ತು ನೆರೆಯ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ರೈತರಿಗೆ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ಈ ಸರ್ಕಾರ ಮಾಡಿಲ್ಲ. ಕೃಷಿ ಬಗ್ಗೆ ಸರ್ಕಾರ ಸಂಪೂರ್ಣ ತಲೆಕೆಡಿಸಿಕೊಂಡಿಲ್ಲ. ಅಭಿವೃದ್ಧಿ ಶೂನ್ಯ ಮತ್ತು ಭ್ರಷ್ಟಾಚಾರ ಮಾತ್ರವೇ ಈ ಸರ್ಕಾರದ ಸಾಧನೆ” ಎಂದು ಕಿಡಿಕಾರಿದರು.
ತುಮಕೂರಿನ ಸಮಾವೇಶಕ್ಕೆ ರಾಜ್ಯದ ತೆರಿಗೆದಾರರ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಜನರನ್ನು ಸರ್ಕಾರಿ ಬಸ್‌ಗಳಲ್ಲಿ ಬಲವಂತವಾಗಿ ಸಮಾವೇಶಕ್ಕೆ ಕರೆತರಲಾಗಿದೆ. ಇಂತಹ ಸಮಾವೇಶ ಮಾಡುವಂಥ ಯಾವುದೇ ಘನಂದಾರಿ ಕೆಲಸವನ್ನು ಸರ್ಕಾರ ಮಾಡಿಲ್ಲ. ಕೇವಲ ಗ್ಯಾರಂಟಿ ನೆಪವೊಡ್ಡಿ ಸರ್ಕಾರ ಬದುಕಿದೆ ಎಂದು ತೋರಿಸಿಕೊಳ್ಳಲು ಈ ನಾಟಕವಾಡುತ್ತಿದ್ದಾರೆ. ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರಬಹುದು, ಆದರೆ ಅದು ಗ್ಯಾರಂಟಿ ಹಣ ಬಿಡುಗಡೆ ಮಾಡಿ ತಂದ ಗೆಲುವು. ಈ ಗೆಲುವಿನ ನಾಗಾಲೋಟ ಬಹಳ ದಿನ ಮುಂದುವರೆಯಲ್ಲ” ಎಂದರು.
























