Home Lead News ಹಿಂದಿಗೆ ಗ್ರೇಡ್‌ಬೇಡ,ಅಂಕ ನೀಡಿ

ಹಿಂದಿಗೆ ಗ್ರೇಡ್‌ಬೇಡ,ಅಂಕ ನೀಡಿ

ಬೆಂಗಳೂರು,ಏ.೨೧-ಹಿಂದಿ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಪ್ರಸಕ್ತ ವರ್ಷದಲ್ಲಿ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.


ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆ ಪದ್ಧತಿಯನ್ನೇ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.


ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿಂದಿ ವಿಷಯಕ್ಕೆ ಅಂಕ ನೀಡುವಂತೆ ಸೂಚನೆ ಹಿನ್ನೆಲೆಯಲ್ಲಿ ಆದೇಶ ನೀಡಿ ಮರುಪರಿಶೀಲನೆ ಕೋರಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.


ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಮಾಡಿದೆ.

ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಸರ್ಕಾರ ಕರಡು ರೂಪಿಸುತ್ತಿದೆ. ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ವಾದಿಸಿದ್ದರು.


ಆದರೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಸರ್ಕಾರವನ್ನೇ ಈ ಬಗ್ಗೆ ಪ್ರಶ್ನಿಸಿದೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಅಧಿಸೂಚನೆ ಹೊರಡಿಸಿದಾಗಲೇ ಇದನ್ನು ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿಲ್ಲದ ಗ್ರೇಡ್ ಪದ್ಧತಿಯನ್ನ ಈಗ ಅನುಷ್ಠಾನಗೊಳಿಸುತ್ತಿದ್ದೀರಿ? ಪಿಯುಸಿಯಲ್ಲಿ ಈಗ ಶೇ.೮೩ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸಿದ ಬಳಿಕ ಸರ್ಕಾರ ಸೂಕ್ತವೆನಿಸಿದ ಕ್ರಮ ಕೈಗೊಳ್ಳಬಹುದು. ಆದರೆ ನಿಯಮ ರೂಪಿಸುವ ಮುಂಚಿನ ಪರೀಕ್ಷೆಯ ಅಂಕ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿ ಜೊತೆಗೆ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಿಂದಿ ಭಾಷೆಗೆ ಅಂಕ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.


ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಸೇರಿ ಮೂವರು ವಿದ್ಯಾರ್ಥಿನಿಯರು ರಿಟ್ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದಿ ಅಂಕ ಪರಿಗಣಿಸುತ್ತಾರೆ. ಗ್ರೇಡಿಂಗ್ ನೀಡುವುದರಿಂದ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಗ್ರೇಡಿಂಗ್ ಬದಲು ಅಂಕ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿದ್ದರು. ಇನ್ನು ಕೋರ್ಟ್‌ನ ಈ ಆದೇಶ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎಲ್ಲ ತೃತೀಯ ಭಾಷೆಗೂ ಅನ್ವಯ ಆಗಲಿದೆ.


ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ತೃತೀಯ ಭಾಷೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ಆಸಕ್ತಿ ತೋರಿತ್ತು. ಇತ್ತೀಚೆಗೆ ಆ ಬಗ್ಗೆ ಅಧಿಕೃತ ಆದೇಶ ಘೋಷಣೆ ಮಾಡಿತ್ತು. ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತೃತೀಯ ಭಾಷೆಗೆ ನೀಡದೆ, ಅದನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿತ್ತು. ಇದು ಹಿಂದಿ ಭಾಷಾ ಶಿಕ್ಷಕರ ಸಂಘ ಮತ್ತು ಪೋಷಕರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿವಾದವು ಕೇವಲ ಅಂಕಗಳಿಗೆ ಸೀಮಿತವಾಗದೆ, ಭಾಷಾ ನೀತಿಯ ಸಂಘರ್ಷವಾಗಿಯೂ ಬದಲಾಗಿತ್ತು. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳು ಆ ವಿಷಯದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ಇದು ಭವಿಷ್ಯದಲ್ಲಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಹಿನ್ನಡೆಯಾಗಬಹುದು ಎಂಬ ವಾದ ಕೇಳಿಬಂದಿತ್ತು.

\ಅಕ್ಟೋಬರ್ ನಲ್ಲೇ ಸುತ್ತೋಲೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ ೨೦೨೫ರ ಅಕ್ಟೋಬರ್ ೨೮ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ ೨೦೨೬ರ ಮಾರ್ಚ್ ೧೮- ಏಪ್ರಿಲ್ ೨ ರವರೆಗೆ ಪರೀಕ್ಷೆ ನಡೆದಿದೆ. ದಿನಪತ್ರಿಕೆ ವರದಿ ಆಧಾರದ ಮೇಲೆ ಅರ್ಜಿ ವಜಾ ಆಗಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.


ಹೈಕೋರ್ಟ್ ನ್ಯಾಯಮೂರ್ತಿ ಇಂದಿರೇಶ್, ನಿಮ್ಮ ಅಧಿಸೂಚನೆಯ ಉದ್ದೇಶ ಏನು? ಕಳೆದ ವರ್ಷ ೧.೭೫ ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದರು ಎಲ್ಲರನ್ನೂ ಪಾಸ್ ಮಾಡೋದಾ ನಿಮ್ಮ ಅಧಿಸೂಚನೆ? ನಿಮ್ಮ ಉದ್ದೇಶ ಅದಾಗಿರುವುದಿಲ್ಲ ಎಂದರು.


ಶಶಿಕಿರಣ್ ಶೆಟ್ಟಿ ವಾದಿಸಿ, ಫೇಲ್ ಆಗಿದ್ದರೆ ಒಳ್ಳೆಯ ಶಿಕ್ಷಕರರನ್ನು ನೇಮಕ ಮಾಡಿ. ಹಿಂದಿ ಭಾಷೆ ಕಲಿಯಲಿ ಬಿಡಿ. ತೃತೀಯ ಭಾಷೆ ಒಮ್ಮೆ ಕನ್ನಡವೂ ಆಗಿರಲಿದೆ ಅಲ್ವಾ. ಇಲ್ಲಿ ಹಿಂದಿ ತೃತೀಯ ಭಾಷೆ ವಿಚಾರಕ್ಕೆ ಗ್ರೇಡಿಂಗ್ ವ್ಯವಸ್ಥೆ ತರಲಾಗಿದೆ.


ಹಿಂದಿ ಭಾಷೆಯಿಂದ ವಿದ್ಯಾರ್ಥಿಗಳ ಮೇಲೆ ಹೊರೆ ಜಾಸ್ತಿಯಾಗಿದೆ. ನಾವು ಬೇರೆ ಸಬ್ಜೆಕ್ಟ್ಗಳ ಬಗ್ಗೆ ಹೇಳುತ್ತಿಲ್ಲ. ತೃತೀಯ ಭಾಷೆ ಹಿಂದಿ ಬಗ್ಗೆಯಷ್ಟೆ. ಶೇ.೮೦ ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ಫೇಲ್ ಆಗುತ್ತಿದ್ದಾರೆ ಎಂದು ತಿಳಿಸಿದರು.


ಎಲ್ಲರನ್ನೂ ಪಾಸು ಮಾಡುವ ನಿಮ್ಮ ಉದ್ದೇಶ ಸರಿ ಇರಬಹುದು. ಅದು ಕೇಳಲು ಚೆನ್ನಾಗಿದೆ. ಈ ವರ್ಷ ಹೀಗೆ ಇರಲಿ. ಮುಂದಿನ ವರ್ಷದಿಂದ ನೀವು ಇದನ್ನು ಮಾಡಬಹುದು. ಮುಂದಿನ ವರ್ಷ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಅಲ್ವಾ ಎಂದು ಹೇಳಿದ
ನ್ಯಾಯಮೂರ್ತಿ ಇಂದಿರೇಶ್ ಅಂಕಗಳನ್ನು ನೀಡಲು ನಿರ್ದೇಶಿಸಿದರು.


ಮಾರ್ಚ್ ೧೮ ರಿಂದ ಏಪ್ರಿಲ್ ೨ ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಏಪ್ರಿಲ್ ೧೦ ರಂದು ಕರಡು ನಿಯಮಗಳನ್ನು ರೂಪಿಸಲಾಗಿದೆ. ಹೀಗಾಗಿ, ತನ್ನ ಆದೇಶ ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.