Home ಜಿಲ್ಲೆ ಕಲಬುರಗಿ ದ್ವಿಭಾಷಾ ನೀತಿ ಹೆಸರಲ್ಲಿ ಇಂಗ್ಲಿಷ್ ಹೇರಿಕೆ: ಎಐಡಿಎಸ್‍ಓ ಆಕ್ರೋಶ

ದ್ವಿಭಾಷಾ ನೀತಿ ಹೆಸರಲ್ಲಿ ಇಂಗ್ಲಿಷ್ ಹೇರಿಕೆ: ಎಐಡಿಎಸ್‍ಓ ಆಕ್ರೋಶ

ಕಲಬುರಗಿ,ಏ.23-ದ್ವಿಭಾಷಾ ನೀತಿ ಹೆಸರಿನಲ್ಲಿ ಇಂಗ್ಲೀಷ್ ಮಾಧ್ಯಮ ಹೇರಿಕೆ ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮತಿನೇತೃತ್ವದಲ್ಲಿ ನಗರದ ಎಸ್‍ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಡಿಎಸ್‍ಒ ಜಿಲ್ಲಾ ಅಧ್ಯಕ್ಷ ತುಳಜರಾಮ ಎನ್.ಕೆ. ಅವರು ಮಾತನಾಡಿ, ರಾಜ್ಯದ 4404 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ. ಸರಕಾರ ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲೀಷ್‍ನಲ್ಲೇ ಪಾಠ ಮಾಡಲು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದರು.
ಶಾಲೆಗಳಲ್ಲಿ ಜೂನ್‍ನಿಂದ ಕನ್ನಡ ಮಾಧ್ಯಮ ಇರುವುದಿಲ್ಲ. ಬದಲಿಗೆ ಕೇವಲ ಆಂಗ್ಲಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಸರಕಾರದ ಈ ನಡೆ ಖಂಡನೀಯವಾಗಿದೆ. ಮಗುವಿನ ಸಮರ್ಪಕ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಕನಿಷ್ಠ 5ನೇ ತರಗತಿಯವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಸಂವಹನದ ಭಾಷೆಯೇ ಕಲಿಕೆಯ ಭಾಷೆಯಾದಾಗ ಮಗುವು ತನ್ನ ಭಾವನೆಯನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಮತ್ತು ವಿಷಯಗಳನ್ನು ಗ್ರಹಿಸಲು ಸಹಾಯವಾಗುತ್ತದೆ ಎಂಬುವುದ ತಜ್ಞರ ಅಭಿಪ್ರಾಯವನ್ನು ಸರಕಾರ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮತಿ ಸದಸ್ಯರಾದ ಎಸ್.ಎಂ.ಶರ್ಮಾ, ಮಹೇಶ ಎಸ್.ಬಿ., ರಮೇಶ ದೇವಕರ್, ಎಐಡಿಎಸ್‍ಒ ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಳವರ, ನಾಗರಾಜ ರಾವುರ, ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರಜಲ್ಕರ್, ಸದಸ್ಯರಾದ ಯುವರಾಜ, ಬಾಬು, ಬ್ರುಂದಾ, ಸೃಷ್ಟಿ ಸೇರಿದಂತೆ ಮತ್ತಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.