Home ಜಿಲ್ಲೆ ಸರಸ್ವತಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಸರಸ್ವತಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೀದರ: ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಸರಸ್ವತಿ ಶಿಶು ಮಂದಿರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಿಲ್ಲರ್ಗಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಾತನಾಡಿದ ಅವರು, ಶ್ರೀ ಕೃಷ್ಣನ ಲೀಲೆ ಹಾಗೂ ಮಹಿಮೆ ಅಪಾರವಾದದ್ದು. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಬೇಕು ಹಾಗೂ ನಮ್ಮ ಪರಂಪರೆ ಮತ್ತು ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಲಭೀಮರಾವ ಕಚರೆ ಜನವಾಡ ಅವರು ‘ದೇವಕಿ ನಂದನ ಗೋಪಾಲ’ ಭಜನೆಯೊಂದಿಗೆ ತಮ್ಮ ಮಾತುಗಳನ್ನು ಆರಂಭಿಸಿದರು. ಶ್ರೀ ಕೃಷ್ಣನು ಅರ್ಜುನನಿಗೆ ಯುದ್ಧಭೂಮಿಯಲ್ಲಿ ಭಗವದ್ಗೀತೆಯನ್ನು ಬೋಧಿಸಿದ ಪ್ರಸಂಗವನ್ನು ವಿವರಿಸಿದರು.

ಮಕ್ಕಳು ರಾತ್ರಿ ಬೇಗನೆ ಮಲಗಿ ಸೂರ್ಯೋದಯಕ್ಕೂ ಮುನ್ನ ಎದ್ದೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಆರೋಗ್ಯ ಉತ್ತಮವಾಗುವುದರ ಜೊತೆಗೆ ಮನೆಗೆಲಸಗಳು ಸರಿಯಾಗಿ ನಡೆಯುತ್ತವೆ ಎಂದು ಅವರು ತಿಳಿಸಿದರು. ನಸುಕಿನ 3ರಿಂದ 5 ಗಂಟೆಯವರೆಗೆ ದೇವತೆಗಳು ವಿಹಾರ ಮಾಡುತ್ತಾರೆ ಎಂಬ ನಂಬಿಕೆಯಿದ್ದು, ಆ ಸಮಯದಲ್ಲಿ ಮಾಡುವ ಧ್ಯಾನ, ಜಪ ಹಾಗೂ ಪೂಜೆ ದೇವರಿಗೆ ಸಲ್ಲುತ್ತದೆ ಎಂದು ಹೇಳಿದರು.

“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎಂಬುದನ್ನು ಉಲ್ಲೇಖಿಸಿದ ಅವರು, ಮಕ್ಕಳಲ್ಲಿ ಸತ್ಯ ಮಾತನಾಡುವ ಗುಣವನ್ನು ಹಿರಿಯರು ಬೆಳೆಸಬೇಕು. ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ ಹಾಗೂ ಪಂಚಾಕ್ಷರಿ ಮಂತ್ರಗಳನ್ನು ಮಕ್ಕಳಿಗೆ ಕಲಿಸಬೇಕು. ದ್ವಾಪರಯುಗದಲ್ಲಿ ಧರ್ಮದ ರಕ್ಷಣೆಗಾಗಿ ಶ್ರೀ ಕೃಷ್ಣ ಅವತಾರ ತಾಳಿದ್ದರು ಎಂದು ವಿವರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ ಹಾಗೂ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಊರ್ಮಿಳಾ ಬಕ್ಷಿ ಉಪಸ್ಥಿತರಿದ್ದರು.

ಮಾತೃಭಾರತಿಯ ಮಾತೆಯಾದ ಶ್ರೀಮತಿ ದಿವ್ಯಾ ಸುನಿಲ ಅವರು ಸ್ವಾಗತ ಹಾಗೂ ಪರಿಚಯ ಮಾಡಿದರು. ಕುಮಾರಿ ಶ್ವೇತಾ ಮಚಕುರಿ ಭಕ್ತಿಗೀತೆ ಹಾಡಿದರು. ಅರುಣ ವರ್ಗದ ವೈಷ್ಣವಿ ಸುನಿಲ ಶ್ಲೋಕ ಪಠಿಸಿದರು. ಶ್ರೀಮತಿ ಸೋನಿಯಾ ವಿರೇಶ ವಂದನಾರ್ಪಣೆ ನೆರವೇರಿಸಿದರೆ, ಶ್ರೀದೇವಿ ಗುರುಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ಜನ್ಮಾಷ್ಟಮಿ ಅಂಗವಾಗಿ ಶಾಲೆಯ 90 ಮಕ್ಕಳು ರಾಧಾ-ಕೃಷ್ಣರ ವೇಷಧಾರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕೊನೆಯಲ್ಲಿ ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.