
ಯಾದಗಿರಿ: ಕಳಂಕರಹಿತ ಆಡಳಿತ ಹಾಗೂ ಅಭಿವೃದ್ಧಿಯ ಮೂಲಕ ದೇಶದ ಗಮನ ಸೆಳೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಪೀಳಿಗೆಗೆ ಆದರ್ಶ ಹಾಗೂ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ಸತತ ೨೫ ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ನಗರದ ಸುಭಾಷ್ ವೃತ್ತದಲ್ಲಿ ಆಯೋಜಿಸಿದ್ದ ‘ಸೇವಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮೋದಿ ಅವರು ಧೀಮಂತ ನಾಯಕ ಎಂದು ಬಣ್ಣಿಸಿದ ರಾಜುಗೌಡ, ವೈಯಕ್ತಿಕ ಸಂಕಷ್ಟಗಳ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ದೇಶದ ಮೇಲೆ ಹಿಂದೆ ಉಗ್ರರ ದಾಳಿ ಸೇರಿದಂತೆ ಹಲವು ಭದ್ರತಾ ಸವಾಲುಗಳು ಎದುರಾಗುತ್ತಿದ್ದವು. ಆದರೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದೇಶದ್ರೋಹಿಗಳು ಹಾಗೂ ಆಕ್ರಮಣಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತಹ ನಾಯಕರು ದೇಶಕ್ಕೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಕೈ ಬಲಪಡಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಸೇವಾ ಜ್ಯೋತಿಗೆ ಸ್ವಾಗತ
ಸುರಪುರದಿಂದ ಆಗಮಿಸಿದ ‘ಸೇವಾ ಜ್ಯೋತಿ’ಯನ್ನು ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಸುಭಾಷ್ ವೃತ್ತ, ಡಿಗ್ರಿ ಕಾಲೇಜು ರಸ್ತೆ, ಕನಕ ವೃತ್ತ, ಗಾಂಧಿ ಚೌಕ್, ಚಕ್ರಕಟ್ಟಾ ಹಾಗೂ ಗಂಜ್ ವೃತ್ತದ ಮೂಲಕ ಮೆರವಣಿಗೆ ನಡೆಸಿ ಕಲಬುರಗಿಗೆ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ರಾಜಶೇಖರ್ ಗೂಗಲ್, ನಾಗರತ್ನ ಕುಪ್ಪಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಚಂದ್ರಶೇಖರ್ ಮಾಗನೂರು, ದೇವೇಂದ್ರನಾಥ ನಾದ, ಎಚ್.ಸಿ. ಪಾಟೀಲ್, ಸಿದ್ದಣ್ಣಗೌಡ ಕಾಡಂನೋರ್, ವೆಂಕಟರೆಡ್ಡಿ ಅಬ್ಬೆತೂಮಕೂರು, ಮಾಜಿ ಜಿ.ಪಂ. ಅಧ್ಯಕ್ಷ ರಾಜಾ ಹನುಮಂತ ನಾಯಕ, ಯಲ್ಲಪ್ಪ ಕುರಕುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೆಲ್ಲಪ್ಪ ಗುಳಗಿ ಹಾಗೂ ಪರಶುರಾಮ ಕುರಕುಂದಿ, ಶಿವರಾಜ್ ದೇಶಮುಖ್, ಜಿಲ್ಲಾ ವಕ್ತಾರ ಹನುಮಂತ ಇಟಗಿ, ವೇಣುಮಾಧವ ನಾಯಕ, ಜಿಲ್ಲಾ ಖಜಾಂಚಿ ತಿರುಪತಿರೆಡ್ಡಿ ಸೇರಿದಂತೆ ಪಕ್ಷದ ವಿವಿಧ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.























