Home ಜಿಲ್ಲೆ ಬೆಂಗಳೂರು ವೆಂಕಟಾಚಲಪತಿಗೆ ಶಾಸಕರಿಂದ ವಿಶೇಷ ಸನ್ಮಾನ

ವೆಂಕಟಾಚಲಪತಿಗೆ ಶಾಸಕರಿಂದ ವಿಶೇಷ ಸನ್ಮಾನ

ಕೋಲಾರ, ಅ.೮ – ಕೋಲಾರ ಜಿಲ್ಲೆಯ ನಿರ್ಮಾತೃ ಎಂದೇ ಖ್ಯಾತರಾದ ಟಿ. ಚನ್ನಯ್ಯ ಅವರ ೧೧೫ನೇ ಜನ್ಮದಿನಾಚರಣೆಯನ್ನು ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನೆರವೇರಿಸಲಾಯಿತು.


ಈ ಸಮಾರಂಭದಲ್ಲಿ ನಾಡು-ನುಡಿ ಹಾಗೂ ಜಾನಪದ ಕಲೆಗೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಈನೆಲ ಈಜಲ ಖ್ಯಾತಿಯ ವೆಂಕಟಾಚಲಪತಿರನ್ನು ಬಂಗಾರಪೇಟೆ ಶಾಸಕ ಎಸ್. ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ. ವೈ. ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಹಾಗೂ ಅನಿಲ್ ಕುಮಾರ್ ಸೇರಿದಂತೆ ಜಿಲ್ಲೆಯ ಹಲವು ಶಾಸಕರು ಮತ್ತು ಗಣ್ಯರು ವೆಂಕಟಾಚಲಪತಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಸನ್ಮಾನಿಸಿದರು.


ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷನಾಗಿ ಸುಮಾರು ೨೫ ವರ್ಷಗಳಿಂದ ಜನಪದ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಶಾಲಾ-ಕಾಲೇಜುಗಳಲ್ಲಿ ಜನಪದ ಉಳಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಉಚಿತವಾದ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ಮೂಡಿಸುವ ಸಾವಿರಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಅವರ ಸೇವೆಯನ್ನು ಪರಿಗಣಿಸಿ ಚನ್ನಯ್ಯರವರ ಜಯಂತಿಯಲ್ಲಿ ಈನೆಲ ಈಜಲ ವೆಂಕಟಾಚಲಪತಿ ಹಾಗೂ ತಂಡದವರನ್ನು ಸನ್ಮಾನಿಸಲಾಯಿತು.


ಕಲಾವಿದರಾದ ತಬಲ ರಮಣ, ಜನಪದ ಗಾಯಕಿ ಸೌದಾಮಿನಿ, ಕೀಬೋರ್ಡ್ ವಾದಕರಾದ ಖಾದ್ರಿಪುರ ರವಿ ಹಾಗೂ ಇತರರು ಭಾಗವಹಿಸಿ ಸಾಂಸ್ಕೃತಿಕ ರಸದೌತಣ ನೀಡಿದರು. ಕಾರ್ಯಕ್ರಮದಲ್ಲಿ ಟಿ. ಚನ್ನಯ್ಯ ಅವರ ಕುಟುಂಬದವರು ಹಾಗೂ ಬಳಗದವರು ಉಪಸ್ಥಿತರಿದ್ದು ಮೆರುಗು ತಂದರು.