
ವಿಜಯಪುರ, ಜೂ. 17: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ
ಸಮಾಜ ಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ
ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಹಾಗೂ ವೃತ್ತಿ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ವೃತ್ತಿ ಮಾರ್ಗದರ್ಶನ
ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸಂತೋಷ ಹಳೆಮನಿ ಮಾತನಾಡಿ, ಸಮಾಜ ಕಾರ್ಯ ಎಂದರೆ ಕೇವಲ
ಪುಸ್ತಕದಲ್ಲಿರುವ ಸಿದ್ಧಾಂತವಲ್ಲ. ಅದು ಬದುಕಿನ ನಡುವೆ ಇಳಿದು, ಜನರ ನೋವಿಗೆ ಕಿವಿಯಾಗಿ, ಅವರ ಶಕ್ತಿಯಾಗುವ ಪ್ರಯೋಗ ಶಾಲೆ ಎಂದರು. ನಂತರ ಎಂಎಸ್‍ಡಬ್ಲ್ಯು ವಿದ್ಯಾರ್ಥಿಗಳಿಗೆ
ಪ್ರಸ್ತುತ ಉದ್ಯೋಗಾವಕಾಶಗಳು, ವೃತ್ತಿಪರ ರೆಸ್ಯೂಮ್
ತಯಾರಿಕೆ, ಸಂದರ್ಶನ ಕೌಶಲ್ಯಗಳು, ಸಂವಹನ ಮತ್ತು
ವ್ಯಕ್ತಿತ್ವ ವಿಕಸನ, ಲಿಂಕ್ಡ್ ಇನ್ ನೆಟ್ವಕಿರ್ಂಗ್, ಫ್ರಿಲಾನ್ಸಿಂಗ್ ಹಾಗೂ
ಕನ್ಸಲ್ಟೆನ್ಸಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ವೇಳೆ ಸಾಮಾಜಿಕ ಕ್ಷೇತ್ರದಲ್ಲಿನ ಇತ್ತೀಚಿನ ಪ್ರವೃತ್ತಿಗಳಾದ ಡಿಜಿಟಲ್ ಸಾಮಾಜಿಕ ಕಾರ್ಯ, ಮಾನಸಿಕ ಆರೋಗ್ಯ ಜಾಗೃತಿ, ವರದಿಗಾರಿಕೆ, ಮಹಿಳಾ ಸಬಲೀಕರಣ
ಕಾರ್ಯಕ್ರಮಗಳು, ಡೇಟಾ ಆಧಾರಿತ ಸಾಮಾಜಿಕ ಕಾರ್ಯ ಹಾಗೂ ಹವಾಮಾನ ಮತ್ತು ಸುಸ್ಥಿರತೆ ಯೋಜನೆಗಳ ಬಗ್ಗೆ ವಿವರಿಸಿ
ಹೇಳಿದರು.
ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು
ಎಂಬುದರ ಕುರಿತು ಪ್ರಾಯೋಗಿಕ ಮಾಹಿತಿಯನ್ನು ಸಹ
ಪ್ರಶಿಕ್ಷಣಾರ್ಥಿಗಳಿಗೆ ಒದಗಿಸಿದರು.
ಜೊತೆಗೆ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ
ಸಂದರ್ಶನಗಳನ್ನು ಎದುರಿಸುವುದು, ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ತಮ್ಮ ವೃತ್ತಿ ಜೀವನವನ್ನು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳುವ ಕುರಿತು ಮಾರ್ಗದರ್ಶನ ಮಾಡಲಾಯಿತು.
ಕಾರ್ಯಕ್ರಮದ ನಂತರ ಕಾರ್ಯಕ್ರಮದ
ಸವಿನೆನಪಿಗಾಗಿ ಪರಿಸರದ ಜೊತೆ ಸಮಾಜ ಕಾರ್ಯ ಸಂಬಂಧಗಳು
ಹಚ್ಚ ಹಸರಾಗಿ ಎಲ್ಲೆಡೆ ಪಸರಿಸಲಿ ಎಂದು ಆಶಿಸುತ್ತಾ ಸಮಾಜ ಕಾರ್ಯ
ವಿಭಾಗದ ಮುಂದೆ ಸಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಗಂಗಾಧರ ಸೋನಾರ, ತಾಲೂಕು ಮಾಹಿತಿ, ಶಿಕ್ಷಣ
ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ, ಉಪನ್ಯಾಸಕರುಗಳಾದ ಶಿವಲಿಂಗ ಮೇತ್ರಿ, ಶ್ರೀನಾಥ ಪಾಟೀಲ,
ಶರಣಬಸು ಕೊಡಬಾಗಿ ಸೇರಿದಂತೆ ಇತರರು ಹಾಜರಿದ್ದರು.


























