
ಬೆಂಗಳೂರು, ಜೂ. ೨೪- ಆರ್‌ಎಸ್‌ಎಸ್ ನೋಂದಣಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ತೋರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರು ಆರ್‌ಎಸ್‌ಎಸ್‌ನ ನೋಂದಣಿ ದಾಖಲೆ ತರುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ಗೆ ನಾನು ನೋಂದಣಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದೇನೆ. ಅದಕ್ಕೆ ಮೊದಲು ಉತ್ತರ ಕೊಡಲಿ. ನೋಂದಣಿ ದಾಖಲೆ ತೋರಿಸಲಿ ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಆದಾಯ ಕೇಳಿದಕ್ಕೆ ನನ್ನ ಮೇಲೆ ಬಿಜೆಪಿ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಆದಾಯ ಕೇಳಿದರೆ ಇವರಿಗೆ ಏಕೆ ಉರಿ ಎಂದು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್ ಬಗ್ಗೆ ಕೇಳಿದರೆ ನಮ್ಮ ಕುಟುಂಬದ ಬಗ್ಗೆ ವೈಯುಕ್ತಿಕವಾಗಿ ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರು ಪ್ರಿಯಾಂಕ ಖರ್ಗೆ ಬಲಿತ ದಲಿತ ಎಂದು ಹೇಳಿದ್ದಾರೆ. ಎಷ್ಟು ಜನ ಬಲಿತರು ಇದ್ದಾರೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ ಖರ್ಗೆ ಸೂಟ್ ಹಾಕಿಕೊಂಡು ವಿಧಾನಸೌಧದಲ್ಲಿ ಕುಳಿತಿರುತ್ತಾರೆ ಎಂದು ಅಪಪ್ರಚಾರ ಮಾಡಿದರು. ಏಕೆ, ನಾನು ಸೂಟ್ ಹಾಕಬಾರದ ಎಂದು ಅವರು ಪ್ರಶ್ನಿಸಿದರು.
ಕಳೆದ ಅಧಿವೇಶನದಲ್ಲಿ ಬಿಜೆಪಿಯ ಸುನೀಲ್‌ಕುಮಾರ್ ಫೈಲ್ಸ್ ಬಂದ ಹಾಗೆ ಪ್ರಿಯಾಂಕ ಖರ್ಗೆ ಮಾತನಾಡುತ್ತಾರೆ. ಒಂದು ಲೋಟ ಹಾಲು ಹೆಚ್ಚು ಕುಡಿದಿದ್ದಾರೆ, ಅದಕ್ಕೆ ಪ್ರಿಯಾಂಕ ಖರ್ಗೆಗೆ ಜ್ಞಾನ ಹೆಚ್ಚು ಎಂದೆಲ್ಲಾ ಮಾತನಾಡಿದ್ದರು. ಒಬ್ಬ ದಲಿತ ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಮಾಡಬಾರದು ಎನ್ನುವುದು ಈ ಬಿಜೆಪಿ ನಾಯಕರ ಉದ್ದೇಶ ಎಂದು ಪ್ರಿಯಾಂಕ್ ಕಿಡಿಕಾರಿದರು.
ಸಚಿವ ಸತೀಶ್ ಜಾರಕಿಹೊಳಿಯವರ ಸಂಬಂಧಿ ಅಧಿಕಾರಿಯ ಮೇಲೆ ಇ.ಡಿ. ದಾಳಿ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲಾ ರಾಜಕೀಯ ಪ್ರೇರಿತ ದಾಳಿಗಳು. ಮುಂದೆ ನಮ್ಮ ಮೇಲೂ ದಾಳಿಯಾಗಬಹುದು. ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿವೆ. ಯಾವಾಗ ಬೇಕಾದರೂ ಛೂ ಬಿಡುತ್ತಾರೆ ಎಂದು ಹೇಳಿದರು.
ನಮ್ಮ ಮೇಲೆ ಐಟಿ-ಇಡಿ ದಾಳಿ ಎಂದೆಲ್ಲಾ ಏನು ಬೇಕಾದರೂ ಆಗಬಹುದು ಎಂದು ಅವರು ತಿಳಿಸಿದರು.
ಹರಿಹರದಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಆತನ ವಿಚಾರಣೆ ನಡೆದಿದ್ದು, ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ ಎಂದರು.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಬಂಧಿತ ವ್ಯಕ್ತಿ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಪಾಕ್ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿರುವ ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್. ಅಶೋಕ್ ಮೊದಲು ಅವರದ್ದನ್ನು ನೋಡಿಕೊಳ್ಳಲಿ. ದೆಹಲಿಯಿಂದ ಬಂದಿದ್ದಾರೆ. ಅವರ ವರಿಷ್ಠರು ಉಗಿದು ಕಳುಹಿಸಿದ್ದಾರೆ. ನನ್ನ ಹೆಸರು ಪ್ರಸ್ತಾಪ ಮಾಡದಿದ್ದರೆ ಅವರಿಗೆ ನಿದ್ರೆ ಬರಲ್ಲ ಎಂದು ವ್ಯಂಗ್ಯವಾಡಿದರು.
ಈ ಹಿಂದೆಯೆಲ್ಲಾ ಡ್ರಗ್ಸ್ ಹಾವಳಿ ಇರಲಿಲ್ಲವೇ, ಅಪರಾಧ ನಡೆದೇ ಇರಲಿಲ್ಲವೇ. ನಮಗೆ ಅಪರಾಧ ತಡೆಯುವ ಸಾಮರ್ಥ್ಯ ಇದೆ. ನಿರ್ವಹಣೆ ಮಾಡುವ ಶಕ್ತಿಯೂ ಇದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಡೀಪ್ ಟೆಕ್ನಾಲಜಿ ಪಾರ್ಕ್‌ಗೆ ೨ ಸಾವಿರ ಎಕರೆ ಜಮೀನು ಸ್ವಾಧೀನಕ್ಕೆ ಚಿಂತನೆ ನಡೆದಿದೆ. ಎಲ್ಲದಕ್ಕೂ ವಿರೋಧ ಮಾಡಿದರೆ ಏರೋ ಸ್ಪೇಸ್ ಟೆಕ್ ಪಾರ್ಕ್ ಟೌನ್‌ಶಿಪ್ ಮಾಡುವುದು ಹೇಗೆ, ನಾವು ರೈತರ ಜಮೀನನ್ನು ಕಸಿಯುವುದಿಲ್ಲ. ಅವರ ಒಪ್ಪಿಗೆ ಪಡೆದೇ ಭೂಸ್ವಾಧೀನ ಮಾಡುತ್ತೇವೆ ಎಂದು ಅವರು ಹೇಳಿದರು.





























