Home ಜಿಲ್ಲೆ ಪ್ರಾಮಾಣಿಕತೆಗೆ ಮಾದರಿಯಾದ ಆಶ್ರಯ ಕೇಂದ್ರ: ೧೬ ಸಾವಿರ ಹಣವಿದ್ದ ಪರ್ಸ್ ಮರಳಿ ನೀಡಿದ ಬೀರಲಿಂಗಪ್ಪ ಕಿಲ್ಲನಕೇರಾ

ಪ್ರಾಮಾಣಿಕತೆಗೆ ಮಾದರಿಯಾದ ಆಶ್ರಯ ಕೇಂದ್ರ: ೧೬ ಸಾವಿರ ಹಣವಿದ್ದ ಪರ್ಸ್ ಮರಳಿ ನೀಡಿದ ಬೀರಲಿಂಗಪ್ಪ ಕಿಲ್ಲನಕೇರಾ

ಯಾದಗಿರಿ:ಜೂ.೧೫: ಇಂದಿನ ಸ್ವಾರ್ಥದ ಬದುಕಿನ ನಡುವೆಯೂ ಮಾನವೀಯತೆ ಹಾಗೂ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಯಾದಗಿರಿ ನಗರದ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಜವಳಗಿ ಬಿ ಗ್ರಾಮದ ಬಾಲಪ್ಪ ತಂದೆ ಶರಣಪ್ಪ ಅವರು ಕೆಲಸದ ಹುಡುಕಾಟದಲ್ಲಿ ಯಾದಗಿರಿಗೆ ಆಗಮಿಸಿ ನಗರದ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ತಂಗಿದ್ದರು. ತಮ್ಮ ಊರಿಗೆ ತೆರಳುವ ಉದ್ದೇಶದಿಂದ ಬಸ್ ಹತ್ತಿದ ಸಂದರ್ಭದಲ್ಲಿ ಪ್ಯಾಂಟ್ ಜೇಬಿನಲ್ಲಿದ್ದ ಪರ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಪರ್ಸ್ನಲ್ಲಿ ಸುಮಾರು ?೧೫ ಸಾವಿರದಿಂದ ?೧೬ ಸಾವಿರದವರೆಗೆ ಹಣವಿದ್ದ ಕಾರಣ ಬಾಲಪ್ಪ ಆತಂಕಕ್ಕೊಳಗಾಗಿ, ಯಾರೋ ಕಳ್ಳತನ ಮಾಡಿದ್ದಾರೆ ಎಂದು ಭಾವಿಸಿ ಕಂಗಾಲಾಗಿದ್ದರು. ಕೈಯಲ್ಲಿ ಬಸ್ ಟಿಕೆಟ್ ಪಡೆಯಲು ಹಣವೂ ಇಲ್ಲದ ಪರಿಸ್ಥಿತಿ ಎದುರಾಗಿತ್ತು. ಬಳಿಕ ಪಕ್ಕದಲ್ಲಿದ್ದ ಪ್ರಯಾಣಿಕರ ಸಹಾಯದಿಂದ ಫೋನ್‌ಪೇ ಮೂಲಕ ಟಿಕೆಟ್ ಪಡೆದು ಊರಿಗೆ ತೆರಳಿದ್ದರು.
ಹಣ ಕಳೆದುಕೊಂಡ ನೋವಿನಲ್ಲಿ ದಿಕ್ಕು ತೋಚದೆ ಕುಳಿತಿದ್ದ ಬಾಲಪ್ಪ ಅವರಿಗೆ ಇದೇ ವೇಳೆ ಯಾದಗಿರಿಯ ಆಶ್ರಯ ಕೇಂದ್ರದ ಸಿಬ್ಬಂದಿ ಬೀರಲಿಂಗಪ್ಪ ಕಿಲ್ಲನಕೇರಾ ಅವರಿಂದ ದೂರವಾಣಿ ಕರೆ ಬಂದಿದೆ.
ಮೊದಲ ಎರಡು ಬಾರಿ ಕರೆ ಸ್ವೀಕರಿಸದ ಬಾಲಪ್ಪ, ನಂತರ ಕರೆ ಸ್ವೀಕರಿಸಿ “ಸರ್, ಬಸ್ಸಿನಲ್ಲಿ ಬರುತ್ತಿದ್ದಾಗ ನನ್ನ ಪರ್ಸ್ ಕಳೆದುಹೋಗಿದೆ. ತುಂಬಾ ಬೇಸರವಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಬೀರಲಿಂಗಪ್ಪ ಅವರು, “ಚಿಂತೆ ಮಾಡಬೇಡ, ನಿನ್ನ ಪರ್ಸ್ ಸಿಕ್ಕಿದೆ. ಬೇಗ ಯಾದಗಿರಿಗೆ ಬಾ” ಎಂದು ತಿಳಿಸಿದರು. ಆರಂಭದಲ್ಲಿ ಬಾಲಪ್ಪ ಇದನ್ನು ನಂಬಲಾರದಷ್ಟು ಆಶ್ಚರ್ಯಗೊಂಡಿದ್ದರು.
ಆದರೆ ವಾಸ್ತವ ಬೇರೆಯೇ ಆಗಿತ್ತು. ಆಶ್ರಯ ಕೇಂದ್ರದಲ್ಲಿ ಮಲಗಿದ್ದ ವೇಳೆ ಬಾಲಪ್ಪ ತಮ್ಮ ತಲೆದಿಂಬಿನ ಪಕ್ಕದಲ್ಲೇ ಪರ್ಸ್ ಇಟ್ಟು ಮರೆತು ಹೋಗಿದ್ದರು. ಬಳಿಕ ಆಶ್ರಯ ಕೇಂದ್ರಕ್ಕೆ ಬಂದ ಬೀರಲಿಂಗಪ್ಪ ಅವರು ಮೊಬೈಲ್ ಚಾರ್ಜ್ ಮಾಡಲು ಕೇಬಲ್ ಹುಡುಕುವ ಸಂದರ್ಭದಲ್ಲಿ ಬೆಡ್‌ಶೀಟ್ ಎತ್ತಿ ನೋಡಿದಾಗ ಹಣವಿದ್ದ ಪರ್ಸ್ ಪತ್ತೆಯಾಗಿತ್ತು.
ತಕ್ಷಣವೇ ಬಾಲಪ್ಪ ಅವರನ್ನು ಸಂಪರ್ಕಿಸಿ ಯಾದಗಿರಿಗೆ ಕರೆಸಿಕೊಂಡ ಅವರು, ಪರ್ಸ್ನಲ್ಲಿದ್ದ ಸಂಪೂರ್ಣ ಹಣದೊಂದಿಗೆ ಅದನ್ನು ಹಸ್ತಾಂತರಿಸಿದರು. ಹಲವು ಗಂಟೆಗಳ ಆತಂಕದ ಬಳಿಕ ತನ್ನ ಹಣ ಸುರಕ್ಷಿತವಾಗಿ ಮರಳಿ ಪಡೆದ ಬಾಲಪ್ಪ ಅವರ ಕಣ್ಣಂಚಿನಲ್ಲಿ ಸಂತಸದ ಕಣ್ಣೀರು ತುಂಬಿತು.
ಈ ಘಟನೆ ಆಶ್ರಯ ಕೇಂದ್ರದಲ್ಲಿದ್ದವರಿಗೂ ಭಾವನಾತ್ಮಕ ಕ್ಷಣವಾಗಿದ್ದು, ಬೀರಲಿಂಗಪ್ಪ ಕಿಲ್ಲನಕೇರಾ ಅವರ ಪ್ರಾಮಾಣಿಕ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
“ಹಣ ಕಳೆದುಕೊಂಡ ನೋವಿಗಿಂತ, ಅದನ್ನು ಪ್ರಾಮಾಣಿಕವಾಗಿ ಮರಳಿ ಪಡೆದ ಸಂತಸವೇ ದೊಡ್ಡದು” ಎಂದು ಭಾವುಕರಾದ ಬಾಲಪ್ಪ, ಬೀರಲಿಂಗಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾಜದಲ್ಲಿ ಇನ್ನೂ ಮಾನವೀಯತೆ, ಸೇವಾ ಮನೋಭಾವ ಹಾಗೂ ಪ್ರಾಮಾಣಿಕತೆ ಜೀವಂತವಾಗಿವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.