Home ಜಿಲ್ಲೆ ಕಲಬುರಗಿ ಪೈಪ್‍ನಿಂದ ಹೊಡೆದು ಕಾವಲುಗಾರನ ಕೊಲೆ

ಪೈಪ್‍ನಿಂದ ಹೊಡೆದು ಕಾವಲುಗಾರನ ಕೊಲೆ

ಕಲಬುರಗಿ,ಮೇ.17-ಕ್ಷುಲ್ಲಕ ಕಾರಣಕ್ಕೆ ಪೈಪ್‍ನಿಂದ ಹೊಡೆದು ಕಾವಲುಗಾರನೊಬ್ಬನನ್ನು ಕೊಲೆ ಮಾಡಿರುವ ಘಟನೆ ರಾಮ ಮಂದಿರ ಹತ್ತಿರ ನಡೆದಿದೆ.
ಆಳಂದ ತಾಲ್ಲೂಕಿನ ಹಡಲಗಿ ಗ್ರಾಮದ ರವಿಚಂದ್ರ ಖೇಡ್ (45) ಕೊಲೆಯಾದವರು.
ಕೊಲೆಯಾದ ರವಿಚಂದ್ರ ನಿವೃತ್ತ ಬಿಎಸ್‍ಎಫ್ ಯೋಧ ಎಂದು ತಿಳಿದುಬಂದಿದೆ. ರವಿಚಂದ್ರ, ಸಚಿನ್ ಮತ್ತು ಹಣಮಂತ ಎಂಬುವವರು ರಾಮ ಮಂದಿರ ಹತ್ತಿರವಿರುವ ವಿವಾದಿತ ಸ್ಥಳದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ರಾತ್ರಿ ಕಾವಲು ಕಾಯುತ್ತಿದ್ದ ವೇಳೆ ಯಾವುದೋ ವಿಷಯಕ್ಕೆ ರವಿಚಂದ್ರ ಮತ್ತು ಸಚಿನ್ ನಡುವೆ ಗಲಾಟೆಯಾಗಿದ್ದು, ಈ ವೇಳೆ ಪೈಪ್‍ನಿಂದ ಹೊಡೆದು ರವಿಚಂದ್ರನ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ್ ಪೊಲೀಸರು ಸಚಿನ್ ಮತ್ತು ಹಣಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಮುಗಿಲು ಮುಟ್ಟಿದ ಆಕ್ರಂದನ
ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಯೋಧ ರವಿಚಂದ್ರ ಖೇಡ್ ಕೊಲೆಯಾದ ಸುದ್ದಿ ತಿಳಿದು ಅವರ ಕುಟುಂಬದವರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆಗೆ ಕಾರಣ ಏನು ಎಂಬುವುದರ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.