
೧.೫೨ ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ
ತುಮಕೂರು, ಮೇ ೧೯- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ (ಮೇ ೨೦) ೩ ವರ್ಷ ತುಂಬುತ್ತಿರುವ ಸುಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಲ್ಪತರುನಾಡಲ್ಲಿ ಹಮ್ಮಿಕೊಂಡಿದ್ದ ಪ್ರಗತಿಯತ್ತ ಕರ್ನಾಟಕ ಸಾರ್ಥಕ ಸೇವೆಯ ಸಮರ್ಪಣೆ ಹಾಗೂ ಸಾಧನಾ ಸಮಾವೇಶದಲ್ಲಿ ಕೈ ನಾಯಕರು ಮೂರು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನಾಡಿನ ಜನತೆಯ ಮುಂದಿಡುವ ಮೂಲಕ ವಿಪಕ್ಷಗಳ ವಿರುದ್ಧ ರಣಕಹಳೆ ಮೊಳಗಿಸಿದರು.
ರಾಜ್ಯದಲ್ಲಿ ಮುಂಬರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ), ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ೨೦೨೮ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈ ನಾಯಕರು ನಗರದಲ್ಲಿ ನಡೆಸಿದ ಸಾಧನಾ ಸಮಾವೇಶದಲ್ಲಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ರಣವೀಳ್ಯ ಸಾರುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ೩ ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಾಡಿನ ಜನತೆಯ ಗಮನಕ್ಕೆ ತರುವ ಮುಖೇನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂಬ ಮಾತನ್ನು ಕೈ ನಾಯಕರು ಸಾರಿ ಹೇಳಿದರು.
ಮುಂಬರುವ ದಿನಗಳಲ್ಲಿ ನಡೆಯುವ ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಹಾಗೂ ೨೦೨೮ರ ವಿಧಾನಸಭಾ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಕೈ ನಾಯಕರು ಸಾಧನಾ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ಮುಂದೆ ಮನವಿ ಮಾಡಿದ್ದು ಕಂಡು ಬಂತು.
೧.೫೨ ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ ೧,೦೬,೦೦೦, ದರಖಾಸ್ತು ಪೋಡಿ ೨೪,೨೫೬; ಕಂದಾಯ ಗ್ರಾಮ ಹಕ್ಕು ಪತ್ರ ೨೦,೬೬೬ ಮತ್ತು ಪೋಡಿ ಮುಕ್ತ ಅಭಿಯಾನ ೧೫೭೦ ಸೇರಿದಂತೆ ಒಟ್ಟು ೧,೫೨,೪೯೨ ಫಲಾನುಭವಿಗಳಿಗೆ ಹಕ್ಕು ಪತ್ರ / ಆದೇಶ ಪತ್ರಗಳನ್ನು ವಿತರಿಸಿದರು.
ಅಂಗನವಾಡಿ ನೌಕರರಿಗೆ ನೇಮಕಾತಿ ಆದೇಶ ಪತ್ರ
ರಾಜ್ಯದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಟ್ಟು ೬೦೦ ಹುದ್ದೆಗಳ ನೇಮಕಾತಿ ಆದೇಶವನ್ನು ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿತರಿಸುವ ಮೂಲಕ ದಾಖಲೆ ಬರೆದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಸುಮಾರು ೬೬೨.೩೫ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ನೆರವೇರಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು ಮತ್ತು ಮಧುಗಿರಿ, ಲೋಕೋಪಯೋಗಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಇಂಧನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೆಆರ್‌ಐಡಿಎಲ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗಣಿ ಮತ್ತು ಪರಿಸರ ಪುನಶ್ಚೇತನ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ಕೈಗೊಂಡು ಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು, ಹೊಸದಾಗಿ ಕೈಗೆತ್ತಿಕೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಗಿನ್ನಿಸ್ ದಾಖಲೆ
ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜನಸಾಮಾನ್ಯರಿಗೆ ಸೇವೆ, ಹಕ್ಕುಪತ್ರ, ಸವಲತ್ತುಗಳನ್ನು ಒದಗಿಸುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಈ ಸಾಧನೆಗಾಗಿ ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿರುವ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಈ ಸಾಧನೆಯ ಪ್ರಶಸ್ತಿಯನ್ನು ಇಂಗ್ಲೆಂಡ್‌ನಿಂದ ಗಿನ್ನಿಸ್ ಸಂಸ್ಥೆಯವರು ಆಗಮಿಸಿ ಜಿಲ್ಲಾಡಳಿತಕ್ಕೆ ಪ್ರದಾನ ಮಾಡಿದರು.
ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಣೆ
ಕಂದಾಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು, ತಹಶೀಲ್ದಾರರು ಹಾಗೂ ಭೂಮಾಪನಾ ಇಲಾಖೆಯ ಸರ್ವೆಯರ್‌ಗಳು, ಸಹಾಯಕ ಭೂ ದಾಖಲೆಗಳ ಉಪನಿರ್ದೇಶಕರುಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೩ ವರ್ಷ ತುಂಬಿದೆ. ಈ ಮೂರುಗಳಲ್ಲಿ ನಮ್ಮ ಸರ್ಕಾರದ ಎಲ್ಲಾ ವರ್ಗದ ಬಡವರು, ಶೋಷಿತರ ಗ್ಯಾರಂಟಿ ಯೋಜನೆಗಳು ಸೇರಿದಂತೆ ಅಗತ್ಯ ಸವಲತ್ತು ಪ್ರಾಮಾಣಿಕವಾಗಿ ವಿತರಿಸಿದೆ. ಯಾವುದೇ ಸರ್ಕಾರ ಇದುವರೆಗೂ ಜಾರಿಗೊಳಿಸದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡುತ್ತಿದೆ ಎಂದರು.
ರಾಜ್ಯದಲ್ಲಿ ನಡೆದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆ ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ. ಇದು ನಮ್ಮ ಸರ್ಕಾರದ ಬದ್ಧತೆ, ಬಡವರ ಪರ ಇದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನಡೆಯುತ್ತೇವೆ. ರಾಜ್ಯದ ಜನತೆ ಮುಂದಿನ ಚುನಾವಣೆಗಳಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಕಳೆದ ೩ ವರ್ಷಗಳ ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿತ್ತು. ಐದು ಗ್ಯಾರಂಟಿಗಳೂ ಸೇರಿದಂತೆ ಆದ್ಯತಾ ವಿಷಯಗಳನ್ನು ರಾಜ್ಯದ ಜನತೆಗೆ ಆಶ್ವಾಸನೆ ನೀಡಿ ಚುನಾವಣೆ ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದೆವು. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಐದೂ ಗ್ಯಾರಂಟಿಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲದೆ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗಿದೆ. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದರು.
ಅದ್ದೂರಿ ಸ್ವಾಗತ
ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೈ ನಾಯಕರುಗಳಿಗೆ ಕಲ್ಪತರುನಾಡಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ವೇದಿಕೆ ಹತ್ತುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ಹರ್ಷೋದ್ಘಾರ ಮುಗಿಲು ಮುಟ್ಟಿತು.
ರಾರಾಜಿಸಿದ ಕಟೌಟ್‌ಗಳು
ತುಮಕೂರು ನಗರ ಸಂಪೂರ್ಣ ಕಾಂಗ್ರೆಸ್ ಮಯವಾಗಿದ್ದು, ಬಿ.ಹೆಚ್. ರಸ್ತೆ, ಅಶೋಕ ರಸ್ತೆ, ರಿಂಗ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರವುಳ್ಳ ಬೃಹತ್ ಕಟೌಟ್‌ಗಳು, ಪ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.
ಸಮಾವೇಶಕ್ಕೆ ಆಗಮಿಸಿದ್ದ ಸಹಸ್ರಾರು ಮಂದಿ ಫಲಾನುಭವಿಗಳು ಹಾಗೂ ಜನಸಾಮಾನ್ಯರಿಗೆ ಕಾರ್ಯಕ್ರಮದ ಸ್ಥಳದಲ್ಲೇ ಅಚ್ಚುಕಟ್ಟಾಗಿ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಭದ್ರತೆ
ಸರ್ಕಾರದ ಸಾಧನಾ ಸಮಾವೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಕಾರ್ಯಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೩ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಕೃಷ್ಣ ಬೈರೇಗೌಡ, ಡಾ. ಹೆಚ್.ಸಿ. ಮಹದೇವಪ್ಪ, ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ, ಲಕ್ಷ್ಮೀಹೆಬ್ಬಾಳ್ಕರ್, ವೆಂಕಟೇಶ್, ಆರ್.ಬಿ. ತಿಮ್ಮಾಪುರ, ಶಿವರಾಜ ತಂಗಡಗಿ, ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಬಹುತೇಕ ಸಚಿವರು ಮಾಜಿ ಸಚಿವ ಕೆ.ಎನ್. ರಾಜಣ್ಣ, ಶಾಸಕರಾದ ಟಿ.ಬಿ. ಜಯಚಂದ್ರ, ಕೆ. ಷಡಕ್ಷರಿ, ಡಾ. ರಂಗನಾಥ್, ಹೆಚ್.ವಿ. ವೆಂಕಟೇಶ್, ಎಸ್.ಆರ್. ಶ್ರೀನಿವಾಸ್, ಆರ್. ರಾಜೇಂದ್ರ, ಡಿ.ಟಿ. ಶ್ರೀನಿವಾಸ್ ಸೇರಿದಂತೆ ಸಚಿವರುಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.























