
ಯಾದಗಿರಿ: ಆಧಾರ್ ಕಾರ್ಡ್‍ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಹಾಗೂ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಸುಗಮ ಸೇವೆ ಒದಗಿಸಬೇಕು ಎಂದು ವಿಕಾಸ್ ಸಿಲಾ ಇನ್ಸಾನ್ ಪಕ್ಷದ ಜಿಲ್ಲಾಧ್ಯಕ್ಷ ಸಾಬಣ್ಣ ಬಸವಂತಪುರ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಆಧಾರ್ ತಿದ್ದುಪಡಿ ಸೇವೆ ಸಮರ್ಪಕವಾಗಿ ಲಭ್ಯವಾಗದಿರುವುದರಿಂದ ಜನರು ಪರದಾಡುವಂತಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಆನ್‍ಲೈನ್ ತಿದ್ದುಪಡಿ ವ್ಯವಸ್ಥೆಯನ್ನು ಪುನಃ ಸಮರ್ಪಕವಾಗಿ ಜಾರಿಗೊಳಿಸಬೇಕು. ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಆಧಾರ್ ಕೇಂದ್ರಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.





























