
ಕಲಬುರಗಿ,ಸೆ.10-ನಗರದ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಅಶೋಕ ವಿಠ್ಠಲರಾವ ಸಿಂಗೆ (40)ಯನ್ನು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈತ ನಗರದ ಕೆಎಸ್‍ಆರ್‍ಟಿಸಿ ಕಾಲೋನಿ ನಿವಾಸಿಯಾಗಿದ್ದು, ಈತನ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ.
ಆರೋಪಿಯು ರೂಢಿಗತ ಅಪರಾಧಿಯಾಗಿದ್ದು, 2003 ರಿಂದ 2026ನೇ ಸಾಲಿನವರೆಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 4 ಪ್ರಕರಣ, ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ 4 ಪ್ರಕರಣ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಅಡಿಯಲ್ಲಿ 4 ಪ್ರಕರಣ ಸೇರಿದಂತೆ 16 ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟ್ ಪ್ರಸ್ತುತ ಚಾಲ್ತಿಯಲ್ಲಿದೆ.
ಕೊಲೆಯತ್ನ, ಸಲಿಗೆ, ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಹಲ್ಲೆ, ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಛೆಯಿಂದ ಗಾಯವನ್ನುಂಟು ಮಾಡುವುದು, ಶಾಂತಿಭಂಗ ಮಾಡಲು ಉದ್ರೇಕಿಸುವುದಕ್ಕಾಗಿ ಉದ್ದೇಶಪೂರ್ವಕ ಅವಮಾನ ಮಾಡುವುದು, ಅಕ್ರಮ ಕೂಟ ರಚಿಸುವುದು, ಸಾರ್ವಜನಿಕರೊಂದಿಗೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವುದು, ಸಾರ್ವಜನಿಕರ ನೆಮ್ಮದಿಗೆ ಕಂಟಕಪ್ರಾಯವಾಗಿರುವುದು, ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು, ಹಲ್ಲೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಜೀವಭಯ ಹಾಕುವುದು, ಅಪರಾಧಿಕ ಭಯೋತ್ಪಾದನೆ, ಅಕ್ರಮವಾಗಿ ಗಾಂಜಾ ಸಂಗ್ರಹಣೆ ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದ ಮೇರೆಗೆ ಆರೋಪಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆರೋಪಿತನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವೆಂದು ಅಶೋಕನಗರ ಪೊಲೀಸ್ ಠಾಣೆ ಪಿಐ ಸತೀಶ ಕಣಿಮೇಶ್ವರ ಅವರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ರವರ ನ್ಯಾಯಾಲಯ ಕಲಬುರಗಿ ರವರು ವಿಚಾರಣೆ ಕೈಗೊಂಡು ಆರೋಪಿಯನ್ನು ಬೆಂಗಳೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.































