Home ಜಿಲ್ಲೆ ರಸ್ತೆಗಿಳಿದ ಸ್ವೀಪಿಂಗ್ ಮಷಿನ್; ಯಾದಗಿರಿ ರಸ್ತೆಗಳೀಗ ಧೂಳು-ಮಣ್ಣಿನಿಂದ ಮುಕ್ತಿಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ ಬೆನ್ನಲ್ಲೇ ನಗರಸಭೆ...

ರಸ್ತೆಗಿಳಿದ ಸ್ವೀಪಿಂಗ್ ಮಷಿನ್; ಯಾದಗಿರಿ ರಸ್ತೆಗಳೀಗ ಧೂಳು-ಮಣ್ಣಿನಿಂದ ಮುಕ್ತಿಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ ಬೆನ್ನಲ್ಲೇ ನಗರಸಭೆ ಕ್ರಮ

ಯಾದಗಿರಿ: ಜಿಲ್ಲಾಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಅವರ ನಿರಂತರ ಸಿಟಿ ರೌಂಡ್‍ಗೆ ನಗರಸಭೆ ಆಡಳಿತ ಚುರುಕುಗೊಂಡಿದ್ದು, ನಗರದ ರಸ್ತೆ ಸ್ವಚ್ಛತೆ ಕಾರ್ಯಕ್ಕೆ ವೇಗ ದೊರೆತಿದೆ.

ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಅವರು ಪ್ರತಿದಿನ ಬೆಳಗ್ಗೆ ನಗರದ ವಿವಿಧೆಡೆ ಭೇಟಿ ನೀಡಿ, ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಕಂಡುಬರುವ ಸಮಸ್ಯೆಗಳಿಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಕಾರ್ಯಪ್ರವೃತ್ತವಾಗಿದೆ.

ನಗರದ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡುವ ಉದ್ದೇಶದಿಂದ ಯಾದಗಿರಿ ನಗರಸಭೆ ಇದೀಗ ಯಾಂತ್ರಿಕ ರಸ್ತೆ ಸ್ವಚ್ಛತಾ ಯಂತ್ರಗಳನ್ನು (ಸ್ವೀಪಿಂಗ್ ಮಷಿನ್) ರಸ್ತೆಗೆ ಇಳಿಸಿ ಸ್ವಚ್ಛತಾ ಕಾರ್ಯ ಆರಂಭಿಸಿದೆ.

ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ರಸ್ತೆ ಬದಿಯಲ್ಲಿ ದಿನೇದಿನೇ ಸಂಗ್ರಹವಾಗಿದ್ದ ಮಣ್ಣು, ಧೂಳು ಹಾಗೂ ಕಸವನ್ನು ಯಂತ್ರಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ವಿಶೇಷವಾಗಿ ನಗರದ ಪ್ರಮುಖ ವಾಣಿಜ್ಯ ಮತ್ತು ಸಂಚಾರ ಕೇಂದ್ರಗಳಾದ ಸುಭಾಷ್ ವೃತ್ತ ಹಾಗೂ ಸ್ಟೇಷನ್ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ಯಾಂತ್ರಿಕವಾಗಿ ತೆರವುಗೊಳಿಸಿ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗಿದ್ದ ಪರಿಣಾಮ ವಾಹನಗಳು ಸಂಚರಿಸುವಾಗ ಧೂಳು ಏಳುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಮೇಲೆ ಮಣ್ಣು ಹರಡಿಕೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಆತಂಕವೂ ಎದುರಾಗಿತ್ತು.

ನಗರಸಭೆಯ ಈ ಕ್ರಮದಿಂದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಮತ್ತು ಧೂಳಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿದೆ. ಯಾಂತ್ರಿಕ ಸ್ವಚ್ಛತಾ ಯಂತ್ರಗಳ ಬಳಕೆಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಸಾಧ್ಯವಾಗುತ್ತಿದ್ದು, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಹೊಸ ಮೆರುಗು ದೊರೆಯುತ್ತಿದೆ.

ಸ್ವಚ್ಛತಾ ಕಾರ್ಯವನ್ನು ಖುದ್ದಾಗಿ ಸ್ಥಳದಲ್ಲಿಯೇ ಇದ್ದು ಮೇಲ್ವಿಚಾರಣೆ ಮಾಡಿದ ನಗರಸಭೆ ಪೌರಾಯುಕ್ತ ಉಮೇಶ್ ಚವಾಣ್ ಮಾತನಾಡಿ, ರಸ್ತೆ ಬದಿಯಲ್ಲಿ ಸಂಗ್ರಹವಾಗುವ ಮಣ್ಣನ್ನು ಯಾಂತ್ರಿಕವಾಗಿ ತೆರವುಗೊಳಿಸುವ ಮೂಲಕ ನಗರದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡಲು ಸಾಧ್ಯವಾಗಲಿದೆ. ಸಾರ್ವಜನಿಕರು ಮತ್ತು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರಸಭೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಗರದ ಇತರ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿಯೂ ಇದೇ ರೀತಿಯ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ಪರಿಸರ ಅಭಿಯಂತರ ಪ್ರಶಾಂತ್ ಸೂರ್ಯವಂಶಿ, ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಚವಾಣ್, ಸೂಪರ್‍ವೈಸರ್ ಅರುಣ್ ಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.