
ಯಾದಗಿರಿ :ಜೂ.೧೧:ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾಯಿತ ಪ್ರಧಾನಮಂತ್ರಿಯಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಯಾದಗಿರಿ ನಗರದಲ್ಲಿ ಬಿಜೆಪಿ ಅಭಿಮಾನಿಗಳ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಯೋಜಿಸಲಾಯಿತು.
ನಗರದ ಸ್ಟೇಷನ್ ರಸ್ತೆಯಲ್ಲಿನ ಮಳಿಗೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಮಂತ್ರಿಯವರ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಹೇಶ್ ರೆಡ್ಡಿ ಮುದ್ನಾಳ ಅವರು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾಯಿತ ಪ್ರಧಾನಮಂತ್ರಿಯಾಗಿ ಅತೀ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿರುವುದು ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳ ಆಡಳಿತ ಅವಧಿಯಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿ, ಗಡಿ ಭದ್ರತೆ, ಡಿಜಿಟಲ್ ಪರಿವರ್ತನೆ, ರೈತ ಪರ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಪ್ರಗತಿಗೆ ಹೊಸ ದಿಕ್ಕು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಅಂಬ್ರೆಶ್ ಸ್ವಾಮಿ ಹಾಗೂ ಜಗದೀಶ್ ದಾಸನಕೇರಿ ಮಾತನಾಡಿ, ದೇಶದ ಭದ್ರತೆ ಹಾಗೂ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ದೊರೆಯಲಿ. ದೇಶ ಸೇವೆಯ ಕಾರ್ಯವನ್ನು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಸಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಲಕ್ಷ್ಮಿಪುತ್ರ ಮಾಲಿ ಪಾಟೀಲ್, ಅಜಯ್ ಮಡ್ಡಿ, ಶಿವುಗೌಡ, ಶ್ರೀಕಾಂತ ಸುಂಗಲಕರ್, ಆನಂದ್ ಮ್ಯಾಗೇರಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.


























