
ಹೈಕಮಾಂಡ್‌ನಿಂದಲೂ ಸಂದೇಶ ರವಾನೆ
ಬೆಂಗಳೂರು, ಆ. ೪- ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರುಗಳು ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಸಚಿವ ಸಂಪುಟ ವಿಸ್ತರಣೆಯ ನಂತರ ಸಚಿವ ಸ್ಥಾನ ವಂಚಿತ ಶಾಸಕರುಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜೀನಾಮೆ ಕೊಡುವುದು ಎಲ್ಲ ರಾಜಕೀಯದಲ್ಲಿ ನಡೆಯುತ್ತಾ ಇರುತ್ತದೆ. ರಾಜೀನಾಮೆ ಕೊಡುವವರನ್ನು ಯಾರೂ ತಡೆಯಲು ಆಗಲ್ಲ. ರಾಜೀನಾಮೆ ನೀಡಿದರೆ ಅಂತಹ ಶಾಸಕರ ರಾಜೀನಾಮೆಯನ್ನು ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ ಎಂದರು.
ಪಕ್ಷ ಬೇಕು, ಭವಿಷ್ಯ ಬೇಕು ಎಂದರೆ ಶಾಸಕರು ಪಕ್ಷದಲ್ಲಿ ಇರಲಿ. ಪಕ್ಷ ಇದ್ದರೆ ಎಲ್ಲಾ ಎಂದು ಅವರು ಮಾರ್ಮಿಕವಾಗಿ ಅವರು ಹೇಳಿದರು.
ನಿನ್ನೆ ರಾತ್ರಿಯೇ ನಾನು ಏನು ಹೇಳಬೇಕೋ ಎಲ್ಲಾ ಹೇಳಿದ್ದೇನೆ. ನನಗೂ ಧರ್ಮಸಿಂಗ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ತಪ್ಪಿಸಿದ್ದರು. ಆಗ ನಾನು ರಾಜೀನಾಮೆ ಕೊಡಬಹುದಿತ್ತಲ್ಲ. ನಾನು ಪರಮೇಶ್ವರ್ ಇಬ್ಬರು ತಾಳ್ಮೆಯಿಂದ ಇರಲಿಲ್ಲವೇ ಎಂದರು.
ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಂಗಾರಪ್ಪನವರಿಗೆ, ಧರ್ಮಸಿಂಗ್ ರವರಿಗೆ, ಖರ್ಗೆಯವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಅವರು ತಾಳ್ಮೆಯಿಂದ ಇದ್ದುದಕ್ಕೆ ಮುಖ್ಯಮಂತ್ರಿಯಾಗಲಿಲ್ಲವಾ ಎಂದು ಪ್ರಶ್ನಿಸಿದರು.
ಎಲ್ಲಾ ಸಂದರ್ಭದಲ್ಲೂ ತಾಳ್ಮೆಯಿಂದ ಇರಬೇಕಾಗುತ್ತದೆ. ಪಕ್ಷ ತುಂಬಾ ಮುಖ್ಯ. ಯಾರಾದರೂ ರಾಜೀನಾಮೆ ಕೊಟ್ಟರೆ ೫ ನಿಮಿಷದಲ್ಲಿ ಐ ಗೋಯಿಂಗ್ ಟು ಅಕ್ಸೆಪ್ಟ್ ಎಂದು ಖಡಕ್ ಆಗಿ ಹೇಳಿದರು.
ಅಸಮಾಧಾನ ಸ್ಫೋಟ: ಹಲವು ಶಾಸಕರ ರಾಜೀನಾಮೆ ಇಂಗಿತ
ನಿನ್ನೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ನಂತರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಸಚಿವ ಸ್ಥಾನ ಸಿಗದ ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ್, ಗೋಪಾಲಕೃಷ್ಣ ಬೇಳೂರು ಇವರುಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು. ಇವರ ಜತೆಗೆ ಸಚಿವ ಸ್ಥಾನ ವಂಚಿತರಾದ ಬೆಂಗಳೂರಿನ ವಿಜಯನಗರದ ಎಂ. ಕೃಷ್ಣಪ್ಪ, ಬಿಜಾಪುರದ ಅಪ್ಪಾಜಿ ನಾಡಗೌಡ, ಬಾಗೇಪಲ್ಲಿಯ ಸುಬ್ಬಾರೆಡ್ಡಿ, ಬಂಗಾರಪೇಟೆಯ ಎಸ್.ಎನ್. ನಾರಾಯಣಸ್ವಾಮಿ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಸಿಂಧನೂರಿನ ಹಂಪನಗೌಡ ಬಾದರ್ಲಿ, ಸಿರಾದ ಟಿ.ಬಿ. ಜಯಚಂದ್ರ, ಮೈಸೂರಿನ ತನ್ವೀರ್ ಸೇಠ್, ಮೊಣಕಾಲ್ಮೂರಿನ ಶಾಸಕ ಎನ್.ವೈ. ಗೋಪಾಲಕೃಷ್ಣ, ಬೆಂಗಳೂರಿನ ದಿನೇಶ್‌ಗುಂಡೂರಾವ್, ಭದ್ರಾವತಿಯ ಸಂಗಮೇಶ್, ವಿಜಯನಗರದ ಎಂ. ಕೃಷ್ಣಪ್ಪ, ಗೋವಿಂದರಾಜನಗರದ ಪ್ರಿಯಕೃಷ್ಣ, ಶಾಂತಿನಗರದ ಎನ್.ಎ. ಹ್ಯಾರೀಸ್ ಇವರುಗಳೆಲ್ಲಾ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಜತೆಗೆ ಇವರ ಬೆಂಬಲಿಗರು ಪ್ರತಿಭಟನೆ ನಡೆಸಿ ಸಚಿವ ಸ್ಥಾನ ನೀಡದ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಕಾಂಗ್ರೆಸ್ ಹೈಕಮಾಂಡ್ ಯಾರ ಪ್ರತಿಭಟನೆ, ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಯಾರೇ ರಾಜೀನಾಮೆ ನೀಡಿದರೂ ಅಂಗೀಕರಿಸಿ ಎಂದು ಸೂಚನೆ ನೀಡಿದ ಬೆನ್ನಲ್ಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ಅಂಗೀಕರಿಸುವ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿರುವ ಅಸಮಾಧಾನ, ಮುನಿಸು ಶಮನವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ರಾಜೀನಾಮೆ ಅಂಗೀಕಾರಕ್ಕೆ ಹೈಕಮಾಂಡ್‌ನಿಂದ ಖಡಕ್ ಸಂದೇಶ
ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸಚಿವ ಸ್ಥಾನ ಸಿಗದ ಹಲವು ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಕರೆ ಮಾಡಿ ಯಾವುದೇ ಬೆದರಿಕೆ, ಬ್ಲಾಕ್‌ಮೇಲ್‌ಗೆ ಮಣಿಯಬೇಡಿ. ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀಕರಿಸಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸ್ಥಾನ ಸಿಗದ ಶಾಸಕರು ರಾಜೀನಾಮೆ ನೀಡಿದರೆ, ಅವರ ರಾಜೀನಾಮೆಯನ್ನು ಅಂಗೀಕರಿಸುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನೂತನ ಸಚಿವರ ಪಟ್ಟಿಯನ್ನು ಸಿದ್ದಪಡಿಸಿದೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಹಾಗಾಗಿ ಕೆಲವರಿಗೆ ಹಿರಿತನ, ಅರ್ಹತೆ ಇದ್ದರೂ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅವಕಾಶಗಳು ಸಿಗಬಹುದು. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದರೆ ಅದಕ್ಕೆಲ್ಲಾ ಮಣಿಯುವ ಪ್ರಶ್ನೆ ಇಲ್ಲ. ಯಾರೇ ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸಿ ಎಂದು ವರಿಷ್ಠರು ಖಡಕ್ ಸಂದೇಶ ರವಾನಿಸಿದ್ದಾರೆ.
ಸಚಿವ ಸ್ಥಾನ ಸಿಗದ ಯಾವುದೇ ಶಾಸಕರು ಹಾಗೂ ಬೆಂಬಲಿಗರು ಪ್ರತಿಭಟನೆ ಮಾಡಿದರೆ ಅದು ಹೈಕಮಾಂಡ್ ವಿರುದ್ಧದ ಪ್ರತಿಭಟನೆ ಎಂದು ಪರಿಗಣಿಸಲಾಗುತ್ತದೆ. ಕಾರಣ ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡೇ ಅಂತಿಮಗೊಳಿಸಿದೆ. ಹಾಗಾಗಿ ಅಸಮಾಧಾನಿತ ಶಾಸಕರು ಪ್ರತಿಭಟನೆ ಹೋರಾಟ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತಹ ಹೇಳಿಕೆ ನೀಡಿದರೆ ಅದು ಪಕ್ಷ ವಿರೋಧಿ ಎಂದೇ ಪರಿಗಣಿಸಬೇಕು ಎಂಬ ಸಂದೇಶವನ್ನು ಹೈಕಮಾಂಡ್ ಕಳುಹಿಸಿದೆ.
ಯಾವುದೇ ಶಾಸಕರು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಿ, ಅವರ ಮನವೊಲಿಸುವ ಪ್ರಯತ್ನಗಳು ಬೇಡ, ಪಕ್ಷದಲ್ಲಿ ಶಿಸ್ತು ಮುಖ್ಯ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಶಾಸಕರು ನಡೆದುಕೊಳ್ಳಬೇಕು. ಅದು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದರೆ ಅವರ ರಾಜೀನಾಮೆಯನ್ನು ಪಡೆದುಕೊಳ್ಳಿ ಎಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ.
ಹೈಕಮಾಂಡ್‌ನ ಈ ಸೂಚನೆ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ತಣ್ಣಗಾಗುತ್ತವೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ನಿಗಮ ಮಂಡಳಿ ಅಧ್ಯಕ್ಷರುಗಳ ರಾಜೀನಾಮೆಗೆ ಸೂಚನೆ
ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಎರಡೂವರೆ ವರ್ಷ ಅಧಿಕಾರ ಪೂರೈಸಿರುವ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳ ರಾಜೀನಾಮೆಗೆ ಸೂಚನೆ ನೀಡಲಾಗಿದೆ.
ಸಚಿವ ಸ್ಥಾನ ವಂಚಿತ ಶಾಸಕರುಗಳು ಸೇರಿದಂತೆ ಕೆಲ ಹಿರಿಯ ಮುಖಂಡರು, ಕಾರ್ಯಕರ್ತರುಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಗಿರಿಯನ್ನು ನೀಡಲು ಎರಡೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿಗಳ ಅಧ್ಯಕ್ಷರ ರಾಜೀನಾಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಈ ಹಿಂದೆ ಈ ನಿಗಮ ಮಂಡಳಿಗಳ ಅಧ್ಯಕ್ಷರುಗಳನ್ನು ನೇಮಕ ಮಾಡಿದ ಸಂದರ್ಭದಲ್ಲೇ ಎರಡೂವರೆ ವರ್ಷ ಮಾತ್ರ ಅಧಿಕಾರಾವಧಿ. ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಸಂದೇಶವನ್ನು ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಕಾಂಗ್ರೆಸ್ ಪಕ್ಷ ನೀಡಿತ್ತು.
ಅದರಂತೆ ಎರಡೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದ ಅವರು, ಮೊದಲು ಕಾರ್ಯಕರ್ತರಿಗೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿದ್ದೇನೆ. ನಂತರ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿರುವ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದರು.


































