Home Lead News ಕರಾವಳಿ ಜಿಲ್ಲೆಗೆ ವಿಶೇಷ ಪ್ಯಾಕೇಜ್

ಕರಾವಳಿ ಜಿಲ್ಲೆಗೆ ವಿಶೇಷ ಪ್ಯಾಕೇಜ್

ಬೆಂಗಳೂರು, ಸೆ. ೧೮- ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ನಾಂದಿ ಹಾಡಿದೆ.


ಇದೇ ಮೊದಲ ಬಾರಿಗೆ ಕರಾವಳಿ ನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಇಂದು ನಡೆದಿದ್ದು, ಈ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಭರಪೂರ ಯೋಜನೆಗಳಿಗೆ ಸರ್ಕಾರ ಒಪ್ಪಿಗೆ ನೀಡಲಿದ್ದು, ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವುದಕ್ಕೂ ಸಂಪುಟ ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.


ಕರಾವಳಿ ಭಾಗದ ಆರ್ಥಿಕ, ಸಾಮಾಜಿಕ ಹಾಗೂ ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಸಚಿವ ಸಂಪುಟವು ಸಮಗ್ರ ಅಭಿವೃದ್ಧಿಯ ನೀಲನಕ್ಷೆಗೂ ಅನುಮೋದನೆ ನೀಡಲಿದೆ ಎಂದು ಹೇಳಲಾಗಿದೆ.


ಮಂಗಳೂರಿನ ಪಡೀಲ್‌ನಲ್ಲಿರುವ ಪ್ರಜಾಸೌಧದಲ್ಲಿ ನಡೆದಿರುವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದ ೧೩ ಪ್ರಮುಖ ಪ್ರಸ್ತಾವನೆಗಳಿದ್ದು, ಈ ಪ್ರಸ್ತಾವನೆಗಳ ಬಗ್ಗೆ ವಿಸ್ತೃತ ಚರ್ಚೆ ಸಂಪುಟದಲ್ಲಿ ನಡೆದು, ಅವುಗಳಿಗೆ ಅನುಮೋದನೆ ಸಿಗುವ ಸಾಧ್ಯತೆಗಳು ಇವೆ.
ಕರಾವಳಿ ಜಿಲ್ಲೆಗಳ ಮೂಲ ಸೌಕರ್ಯ, ಬಂದರು ವಿಸ್ತರಣೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರಮುಖ ಪ್ರಸ್ತಾವನೆಗಳಿಗೂ ಸಂಪುಟದಲ್ಲಿ ಒಪ್ಪಿಗೆ ಸಿಗಲಿದೆ.


ತುಳು ಭಾಷೆಗೆ ೨ನೇ ಅಧಿಕೃತ ಭಾಷಾ ಸ್ಥಾನಮಾನ
ತುಳು ನಾಡಿನ ಜನರ ಬಹುದಿನಗಳ ಬೇಡಿಕೆಯಾದ ತುಳು ಭಾಷೆಗೆ ರಾಜ್ಯದ ೨ನೇ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವ ಬಗ್ಗೆಯೂ ಸಂಪುಟದಲ್ಲಿ ತೀರ್ಮಾನಗಳು ಆಗಲಿವೆ.


ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯೆಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.
ಕರಾವಳಿಯ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅಗತ್ಯವಿರುವ ವಿಶೇಷ ಅನುದಾನವನ್ನು ಒದಗಿಸುವ ಸಂಬಂಧ ಸಂಪುಟದಲ್ಲಿ ತೀರ್ಮಾನಗಳು ಆಗಲಿವೆ.


ಬಂದರು, ವಿಮಾನ ನಿಲ್ದಾಣ ಅಭಿವೃದ್ಧಿ


ಕರಾವಳಿ ಜಿಲ್ಲೆಗಳಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಕೈಗೊಳ್ಳಲು ಸಂಪುಟದಲ್ಲಿ ಹಲವಾರು ತೀರ್ಮಾನಗಳು ಆಗಲಿವೆ ಎಂದು ಹೇಳಲಾಗಿದ್ದು, ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನಾ ವೆಚ್ಚವನ್ನು ೨೫೦ ಕೋಟಿಗೆ ಹೆಚ್ಚಿಸುವ ಪರಿಷ್ಕೃತ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ, ಜತೆಗೆ ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಬಹು ಉದ್ದೇಶಿತ ಬಂದರು ಹಾಗೂ ಹಡಗು ನಿರ್ಮಾಣ ಅಂಗಣವನ್ನು ಪಿಪಿಪಿ ಮಾದರಿಯಲ್ಲಿ ಸುಮಾರು ೬ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.


ಕಾರವಾರ, ಭಟ್ಕಳ, ಅಂಕೋಲ ತಾಲ್ಲೂಕುಗಳ ೭ ದ್ವೀಪಗಳನ್ನು ಸುಮಾರು ೩೦೦ ಕೋಟಿ ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಪ್ರವಾಸಿ ತಾಣಗಳನ್ನಾಗಿ ರೂಪಿಸಲು ಸಂಪುಟ ಒಪ್ಪಿಗೆ ನೀಡುತ್ತದೆ ಎಂದು ಹೇಳಲಾಗಿದ್ದು, ಉಡುಪಿಯ ಅಯೋಬ ಧರಿಯಾ ಬಹುದೂರ್‌ಗಡ ಮತ್ತು ಮಲ್ಪೆ ದೀಪಗಳನ್ನು ಸುಮಾರು ೩೦೦ ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಂಪುಟ ನೀಡಲಿದೆ.


ಮಂಗಳೂರಿನ ಗುರಪುರ ನದಿ ದ್ವೀಪಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ತೀರ್ಮಾನದ ಜತೆಗೆ ಸುಮಾರು ೬೦ ಕೋಟಿ ರೂ. ವೆಚ್ಚದಲ್ಲಿ ಲೈಟ್‌ಹೌಸ್ ಸುತ್ತಲಿನ ಪರಿಸರವನ್ನು ಪ್ರವಾಸೋದ್ಯಮ ಮತ್ತು ಆದಿತ್ಯ ಕೇಂದ್ರವನ್ನಾಗಿ ರೂಪಿಸುವ ಯೋಜನೆಗೂ ಸಂಪುಟ ಒಪ್ಪಿಗೆ ನೀಡಲಿದೆ.


ಕರಾವಳಿ ಜಿಲ್ಲೆಗಳ ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳಿಗೂ ಸಂಪುಟ ಇಂದು ಒಪ್ಪಿಗೆ ನೀಡಲಿದ್ದು, ಕೋಟೆಪುರ-ಗೋಳಾರ ಸಂಪರ್ಕ ರಸ್ತೆ, ಕಂದಲೂರ ಸೇತುವೆ, ಮರವೂರು ಸೇತುವೆ, ಕಟೀಲು ಸೇತುವೆ, ಪಾಲಿಮಾರ್ ಸೇತುವೆ ಪುನರ್ ನಿರ್ಮಾಣ ಈ ಮೂಲಭೂತ ಸೌಕರ್ಯ ಯೋಜನೆಗಳಿಗೂ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದರ ಜತೆಗೆ ಮಂಗಳೂರಿನ ಮೊಳವೂರು, ಭಟ್ವಳದ ಕರೋಪಾಡಿ ಮತ್ತು ಸಂಗಬೆಟ್ಟು ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಸಂಪುಟ ಒಪ್ಪಿಗೆ ನೀಡಲಿದೆ.


ಗ್ರಾಮ ಗ್ರಂಥಾಲಯಗಳನ್ನು ಕಂಪ್ಯೂಟರೀಕರಣಗೊಳಿಸುವ ಸುಮಾರು ೫೭ ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.
ಇದರ ಜತೆಗೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವೇಗ ನೀಡುವ ಬಗ್ಗೆಯೂ ಸಂಪುಟದಲ್ಲಿ ಚರ್ಚೆ ನಡೆದು ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಬಗ್ಗೆಯೂ ತೀರ್ಮಾನಗಳಾಗುತ್ತವೆ ಎಂದು ಹೇಳಲಾಗಿದೆ.

ಡಿಕೆಶಿ, ಸಚಿವರಿಗೆ ಅದ್ಧೂರಿ ಸ್ವಾಗತ


ಮಂಗಳೂರಿನಲ್ಲಿಂದು ಸಚಿವ ಸಂಪುಟ ಸಭೆ ನಡೆಸಲು ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ಅದ್ಧೂರಿ ಸ್ವಾಗತ ಕೋರಲಾಗಿದೆ.


ಮಂಗಳೂರಿನ ಪಡೀಲ್‌ನಲ್ಲಿರುವ ಪ್ರಜಾಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲಾ ಸಚಿವರು ಇತಿಹಾಸ ಪ್ರಸಿದ್ದ ಕದ್ರಿ ದೇವಸ್ಥಾನದಲ್ಲಿ ಮಂಜುನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.


ಕದ್ರಿ ಮಂಜುನಾಥ ದೇವಾಲಯದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರನ್ನು ತೆರೆದ ಅಂಬಾರಿ ಬಸ್‌ನಲ್ಲಿ ಪಡೀಲ್ ವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು.


ರಣ ಬಿಸಿಲಿನಲ್ಲೂ ಉತ್ಸಾಹದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವರುಗಳು ಪಂಪ್‌ವೆಲ್‌ನಿಂದ ಪ್ರಜಾಸೌಧದವರೆಗೂ ನಡೆದ ಮೆರವಣಿಗೆಯಲ್ಲಿ ಜನರತ್ತ ಕೈ ಬೀಸುತ್ತಾ ಸಾಗಿದ್ದು ವಿಶೇಷವಾಗಿತ್ತು.


ಕೆಲ ಸಚಿವರುಗಳು ಬಿಸಿಲಿನ ರಕ್ಷಣೆಗೆ ತಲೆಗೆ ಬಿಳಿ ಟೋಪಿಯನ್ನು ಹಾಕಿಕೊಂಡಿದ್ದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರುಗಳಿಗೆ ಅಂಬಾರಿ ಬಸ್‌ನಲ್ಲಿ ಮೆರವಣಿಗೆಯಲ್ಲಿ ಸಾಗಿದ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲೂ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಜೈಕಾರದ ಘೋಷಣೆಗಳನ್ನು ಕೂಗಿದರು.


ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕರಾವಳಿಯ ಚಂಡೆವಾದನ, ಹುಲಿವೇಷ, ಗಾರುಡಿ ಗೊಂಬೆಗಳು, ಕೊರಗರ ಕೊಳಲು ವಾದನ, ಬ್ಯಾಂಡ್ ವಾದ್ಯ ಇವೆಲ್ಲಾ ಮೆರವಣಿಗೆಗೆ ಕಳೆ ತಂದವು.

ಮಂಗಳೂರಿನಲ್ಲಿ ರಾಜ್ಯ ಸರ್ಕಾರ


ಮಂಗಳೂರಿನಲ್ಲಿ ಇಂದು ನಡೆದಿರುವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರು ವಾಸ್ತವ್ಯ ಹೂಡಿದ್ದು, ಇಡೀ ಸರ್ಕಾರವೇ ಮಂಗಳೂರಿನಲ್ಲಿದೆ.


ಇಂದಿನ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆಯೇ ಮಂಗಳೂರಿಗೆ ಆಗಮಿಸಿದ್ದರು. ನಿನ್ನೆ ಅವರು ಮಂಗಳೂರಿನ ಜನಪ್ರತಿನಿಧಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು.
ಹಾಗೆಯೇ ವಿವಿಧ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಂಡು ಯುವಜನರ ಜತೆ ಸಂವಾದವನ್ನು ನಡೆಸಿದರು.